ಮನೆ ಸುದ್ದಿ ಜಾಲ ಅಂಡಮಾನ್ ಸಮುದ್ರದಲ್ಲಿ ಮುಳುಗಿದ; ಸುಮಾರು 250 ಜನರಿದ್ದ, ದೋಣಿ..!

ಅಂಡಮಾನ್ ಸಮುದ್ರದಲ್ಲಿ ಮುಳುಗಿದ; ಸುಮಾರು 250 ಜನರಿದ್ದ, ದೋಣಿ..!

0

ಢಾಕಾ : ಸುಮಾರು 250 ಜನರನ್ನು ಹೊತ್ತೊಯ್ಯುತ್ತಿದ್ದ, ಮೀನುಗಾರಿಕಾ ದೋಣಿ ಅಂಡಮಾನ್ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಬೃಹತ್ ರಕ್ಷಣಾ ಕಾರ್ಯ ನಡೆಯುತ್ತಿದೆ. ಜನರು ಹೆಚ್ಚು ತುಂಬಿದ್ದರಿಂದ ದೋಣಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಪ್ರಯಾಣಿಕರಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳು ಇದ್ದರು ಎಂದು ಹೇಳಲಾಗಿದೆ.

ಬಾಂಗ್ಲಾದೇಶವು ಬಂಗಾಳಿ ಹೊಸ ವರ್ಷವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಇಂತಹ ದುರಂತಗಳು ವಲಸಿಗರ ಮಾನವೀಯ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ ಎಂದು ಜಾಗತಿಕ ಸಂಸ್ಥೆಗಳು ಎಚ್ಚರಿಸಿವೆ. ದುರ್ಘಟನೆ ಬಗ್ಗೆ ಯುನೈಟೆಡ್ ನೆಷನ್ಸ್ ಹೈ ಕಮಿಷನರ್ ಫಾರ್ ರಿಫ್ಯೂಜೀಸ್ ಮತ್ತು ಇಂಟರ್‌ನ್ಯಾಷನಲ್ ಆರ್ಗನೈಜೇಶನ್ ಫಾರ್ ಮೈಗ್ರೇಷನ್ ತೀವ್ರ ದುಃಖ ವ್ಯಕ್ತಪಡಿಸಿವೆ.

ಆರಂಭಿಕ ವಿವರಗಳ ಪ್ರಕಾರ, ಟ್ರಾಲರ್ ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ನಿಂದ ಹೊರಟು ಮಲೇಷ್ಯಾ ಕಡೆಗೆ ತೆರಳುತ್ತಿತ್ತು ಎಂದು ವರದಿಯಾಗಿದೆ. ಬಲವಾದ ಗಾಳಿಯ ನಡುವೆ ಅದು ಮಗುಚಿಬಿದ್ದಿದ್ದು, ಹೆಚ್ಚು ಜನರಿದ್ದುದರಿಂದ ಸಮುದ್ರದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಹೇಳಲಾಗಿದೆ. ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಆದರೆ ಹಡಗಿನಲ್ಲಿದ್ದ ಅನೇಕರು ಇನ್ನೂ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಯಾಣಿಕರಲ್ಲಿ ಮಹಿಳೆಯರು, ಮಕ್ಕಳು ಮತ್ತು ಇಡೀ ಕುಟುಂಬಗಳು ಸೇರಿದ್ದಾರೆ ಎಂದು ನಂಬಲಾಗಿದೆ. ಇದು ದುರಂತದ ಪ್ರಮಾಣದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

ಈ ದುರಂತ ಘಟನೆ ದೀರ್ಘಕಾಲದ ಸ್ಥಳಾಂತರ ಮತ್ತು ರೋಹಿಂಗ್ಯಾ ಜನರಿಗೆ ಶಾಶ್ವತ ಪರಿಹಾರಗಳ ಕೊರತೆಯಿಂದ ಉಂಟಾಗುವ ಭೀಕರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ. ರಖೈನ್ ರಾಜ್ಯದಲ್ಲಿ ಇನ್ನೂ ಹಿಂಸಾಚಾರ ಮುಂದುವರಿದಿರುವುದರಿಂದ, ರೋಹಿಂಗ್ಯಾಗಳು ಸುರಕ್ಷಿತವಾಗಿ ತಮ್ಮ ದೇಶಕ್ಕೆ ಮರಳುವ ಸಾಧ್ಯತೆ ಕಡಿಮೆಯಾಗುತ್ತಿದೆ. ಅಂತಾರಾಷ್ಟ್ರೀಯ ನೆರವು ನಿಧಿಗಳು ಕಡಿಮೆಯಾಗುತ್ತಿರುವುದರಿಂದ ಶರಣಾರ್ಥಿಗಳ ಜೀವನ ಇನ್ನಷ್ಟು ಕಷ್ಟಕರವಾಗುತ್ತಿದೆ. ಇದರಿಂದ ಅವರು ಬದುಕಿಗಾಗಿ ಅಪಾಯಕರ ಸಮುದ್ರ ಮಾರ್ಗಗಳನ್ನು ಆರಿಸುತ್ತಿರುವುದು ಕಳವಳ ತಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇದರಿಂದ ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಪ್ರಯಾಣಿಸುತ್ತಾರೆ. ಇದು ದುರಂತಕ್ಕೆ ಕಾರಣವಾಗುತ್ತದೆ. 2017ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ನಂತರ ತೀವ್ರಗೊಂಡ ರೋಹಿಂಗ್ಯಾ ಬಿಕ್ಕಟ್ಟು ಲಕ್ಷಾಂತರ ಜನರನ್ನು ಬಾಂಗ್ಲಾದೇಶಕ್ಕೆ ಪಲಾಯನ ಮಾಡುವಂತೆ ಮಾಡಿದೆ. ಉತ್ತಮ ಜೀವನಕ್ಕಾಗಿ ರೋಹಿಂಗ್ಯಾಗಳು ಮತ್ತು ಕೆಲ ಬಾಂಗ್ಲಾದೇಶೀಯರು ಅಕ್ರಮವಾಗಿ ದೋಣಿಗಳಲ್ಲಿ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸುತ್ತಾರೆ. ಈ ಪ್ರಯಾಣಗಳು ತುಂಬಾ ಅಪಾಯಕಾರಿಯಾಗಿದೆ. ವಿದೇಶಗಳಲ್ಲಿ ಉತ್ತಮ ವೇತನದ ಭರವಸೆಯಿಂದ ದಾರಿ ತಪ್ಪುವ ಇವರು, ಮಾನವ ಕಳ್ಳಸಾಗಣೆ ಮುಂತಾದ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಕಳ್ಳಸಾಗಣೆಗಾರರು ವಲಸಿಗರ ಬಡತನ ಮತ್ತು ಹತಾಶೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.