ಮನೆ ಪೌರಾಣಿಕ ಸೋಮಕ-ಜಂತು

ಸೋಮಕ-ಜಂತು

0

ರಾಜಾ ಸೋಮಕ ಮತ್ತು ಅವನ ಮಗ ಜಂತುವಿನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೨೭-೧೨೮) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

Join Our Whatsapp Group

ಸೋಮಕ ಎಂಬ ಹೆಸರಿನ ಧಾರ್ಮಿಕ ರಾಜನಿದ್ದನು. ಅವನಿಗೆ ಸದೃಶರಾದ ನೂರು ಪತ್ನಿಯರಿದ್ದರು. ಆದರೆ ಆ ಮಹೀಪತಿಯು ಎಷ್ಟು ಪ್ರಯತ್ನಿಸಿದರೂ ಬಹಳ ಕಾಲದವರೆಗೆ ಅವರಲ್ಲಿ ಮಗನನ್ನು ಪಡೆಯಲಾಗಲಿಲ್ಲ. ಹೀಗೆ ಅವನು ಪ್ರಯತ್ನಿಸುತ್ತಿರಲು, ವೃದ್ಧಾಪ್ಯದಲ್ಲಿ ಜಂತು ಎನ್ನುವ ಓರ್ವ ಮಗನು ಆ ನೂರು ಸ್ತ್ರೀಯರಲ್ಲಿ ಹುಟ್ಟಿದನು. ಅವನು ಹುಟ್ಟಿದಾಗ ಎಲ್ಲ ತಾಯಂದಿರೂ ಅವನನ್ನು ಸುತ್ತುವರೆದು ಸದಾಕಾಲವೂ ಅವನನ್ನು ಎತ್ತಿ ಹಿಡಿದು ಅವನ ಕಾಮಭೋಗಗಳನ್ನೆಲ್ಲಾ ಪೂರೈಸುತ್ತಿದ್ದರು. ಒಂದು ದಿನ ಜಂತುವಿನ ಕುಂಡೆಯನ್ನು ಒಂದು ಇರುವೆಯು ಕಚ್ಚಿತು ಮತ್ತು ಅದರಿಂದ ದುಃಖಿತನಾದ ಬಾಲಕನು ನೋವಿನಿಂದ ಕಿರುಚಿದನು. ಆಗ ಅವನ ಎಲ್ಲ ತಾಯಂದಿರೂ ಬಹು ದುಃಖಿತರಾಗಿ ಜಂತುವನ್ನು ಸುತ್ತುವರಿದು ಅವನೊಂದಿಗೆ ರೋದಿಸಿದರು, ಮತ್ತು ಅವರ ರೋದನೆಯು ಜೋರಾಗಿ ಕೇಳಿಸುತ್ತಿತ್ತು. ಅಮಾತ್ಯರು ಮತ್ತು ಪುರೋಹಿತರ ಮಧ್ಯೆ ಸಮಾಲೋಚನೆಯಲ್ಲಿ ಕುಳಿತಿದ್ದ ರಾಜನು ಒಮ್ಮೆಗೇ ಬಂದ ಆ ಅರ್ತನಾದವನ್ನು ಕೇಳಿದನು. ತಕ್ಷಣವೇ ರಾಜನು ಅದೇನೆಂದು ಕಂಡುಕೊಂಡುಬರಲು ಸೇವಕನನ್ನು ಕಳುಹಿಸಲು, ಆ ಸೇವಕನು ಹಿಂದಿರುಗಿ ಬಂದು ಅವನ ಮಗನಿಗಾದುದರ ಕುರಿತು ವರದಿಮಾಡಿದನು. ಆ ಅರಿಂದಮ ಸೋಮಕನು ಮಂತ್ರಿಗಳೊಡನೆ ಅವಸರದಿಂದ ಮೇಲೆದ್ದು ಅಂತಃಪುರವನ್ನು ಹೊಕ್ಕು ಮಗನನ್ನು ಸಂತೈಸಿದನು. ಮಗನನ್ನು ಸಂತವಿಸಿ ರಾಜನು ಅಂತಃಪುರದಿಂದ ಹೊರಬಂದನು ಮತ್ತು ತನ್ನ ಋತ್ವಿಜ ಮತ್ತು ಅಮಾತ್ಯರೊಂದಿಗೆ ಕುಳಿತುಕೊಂಡನು.

ಸೋಮಕನು ಹೇಳಿದನು: “ಒಬ್ಬನೇ ಮಗನಿದ್ದುದಕ್ಕೆ ಧಿಕ್ಕಾರ! ಇದಕ್ಕಿಂತಲೂ ಮಕ್ಕಳೇ ಇಲ್ಲದಿದ್ದರೆ ಒಳ್ಳೆಯದಾಗಿರುತ್ತಿತ್ತು. ಎಲ್ಲ ಜೀವಿಗಳಿಗೂ ನಿತ್ಯವೂ ಒಂದಿಲ್ಲೊಂದು ತೊಂದರೆಯಿರುವುದರಿಂದ ಒಬ್ಬನೇ ಮಗನಿದ್ದರೆ ಶೋಕವು ತಪ್ಪಿದ್ದಲ್ಲ. ಬ್ರಾಹ್ಮಣ! ಮಕ್ಕಳಾಗಲೆಂದು ಸರಿಯಾಗಿ ಪರೀಕ್ಷೆಮಾಡಿಯೇ ಈ ನೂರು ಪತ್ನಿಯರನ್ನು ನಾನು ವರಿಸಿದರೂ ಯಾರೂ ಮಕ್ಕಳನ್ನು ಪಡೆಯಲಿಲ್ಲ! ಅವರೆಲ್ಲರ ಮೇಲೆ ಪ್ರಯತ್ನಿಸಿದರೂ ಹೇಗೋ ಈ ಜಂತುವು ನನ್ನ ಮಗನಾಗಿ ಹುಟ್ಟಿದನು. ಇದಕ್ಕಿಂತ ಪರಮ ದುಃಖವು ಇನ್ನ್ಯಾವುದಿರಬಹುದು? ನನ್ನ ಮತ್ತು ನನ್ನ ಪತ್ನಿಯರ ವಯಸ್ಸು ಮೀರಿಯಾಗಿದೆ. ಅವರಂತೆ ನನ್ನ ಪ್ರಾಣವೂ ಕೂಡ ಈ ಓರ್ವ ಮಗನ ಮೇಲೆ ನಿಂತಿದೆ. ನೂರು ಮಕ್ಕಳಾಗುವ ಬೇರೆ ಯಾವುದಾದರೂ, ಎಷ್ಟೇ ದೊಡ್ಡದಾಗಲೀ, ಸಣ್ಣದಾಗಲೀ ಅಥವಾ ದುಷ್ಕರವಾಗಿರಲೀ, ಕರ್ಮವಿಲ್ಲವೇ?”

ಋತ್ವಿಜನು ಹೇಳಿದನು: “ನೀನು ಬಯಸಿದಂತೆ ನೂರು ಪುತ್ರರನ್ನು ಪಡೆಯುವ ಒಂದು ಕರ್ಮವಿದ್ದೇ ಇದೆ. ಸೋಮಕ! ನೀನು ಮಾಡುವೆಯಂತಾದರೆ ನಾನು ಆ ಕರ್ಮದ ಕುರಿತು ಹೇಳುತ್ತೇನೆ.”

ಸೋಮಕನು ಹೇಳಿದನು: “ಕಾರ್ಯವನ್ನು ಮಾಡಬಹುದೋ ಅಥವಾ ಮಾಡಬಾರದೋ – ನೂರು ಮಕ್ಕಳನ್ನು ಪಡೆಯುವ ಕಾರ್ಯವಿದ್ದರೆ ಹೇಳು. ಭಗವಾನ್! ಆ ವಿಧಿಯ ಕುರಿತು ನನಗೆ ವಿವರಿಸಿ ಹೇಳು.”

ಋತ್ವಿಜನು ಹೇಳಿದನು: “ರಾಜನ್! ನಾನು ಆ ಕ್ರತುವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಜಂತುವನ್ನು ಆಹುತಿಯನ್ನಾಗಿ ನೀಡು. ತಕ್ಷಣವೇ ನೀನು ನೂರು ಶ್ರೀಮಂತ ಮಕ್ಕಳನ್ನು ಪಡೆಯುತ್ತೀಯೆ. ಅವನ ಕೊಬ್ಬನ್ನು ಆಹುತಿಯನ್ನಾಗಿ ನೀಡುವಾಗ ತಾಯಂದಿರು ಹೊಗೆಯನ್ನು ಸೇವಿಸಬೇಕು. ಆಗ ಅವರಲ್ಲಿ ನಿನಗೆ ಮಹಾವೀರರಾದ ಮಕ್ಕಳು ಜನಿಸುತ್ತಾರೆ. ಜಂತುವು ನಿನ್ನ ಮಗನಾಗಿ ಅವಳಲ್ಲಿಯೇ ಪುನಃ ಹುಟ್ಟುತ್ತಾನೆ. ಅವನ ಎಡಬದಿಯಲ್ಲಿ ಬಂಗಾರದ ಚಿಹ್ನೆಯು ಇರುವುದು.”

ಸೋಮಕನು ಹೇಳಿದನು: “ಬ್ರಹ್ಮನ್! ಯಾವ್ಯಾವಾಗ ಏನೇನನ್ನು ಮಾಡಬೇಕೋ ಹಾಗೆಯೇ ಮಾಡು. ಮಕ್ಕಳನ್ನು ಪಡೆಯುವ ಆಸೆಯಿಂದ ನೀನು ಹೇಳಿದುದೆಲ್ಲವನ್ನೂ ಮಾಡುತ್ತೇನೆ.”

ಅನಂತರ ಅವನು ಸೋಮಕನಿಗಾಗಿ ಜಂತುವನ್ನು ಆಹುತಿಯನ್ನಾಗಿತ್ತನು. ಆದರೆ ಕೃಪಾನ್ವಿತ ತಾಯಂದಿರು ಆ ಬಾಲಕನನ್ನು ಬಲಾತ್ಕಾರವಾಗಿ ಎಳೆದಿಟ್ಟುಕೊಂಡರು. “ಅಯ್ಯೋ ನಾವು ನಾಶಗೊಂಡೆವು!” ಎಂದು ತೀವ್ರ ಶೋಕಸಮಾನ್ವಿತರಾಗಿ ಆ ತಾಯಂದಿರು ಅವನ ಬಲಗೈಯನ್ನು ಹಿಡಿದು ಎಳೆದರು. ಆದರೆ ಯಾಜಕನು ಅವನ ಎಡಗೈಯನ್ನು ಹಿಡಿದು ಹಿಂದಕ್ಕೆ ಎಳೆದುಕೊಂಡನು. ಚೀರಾಡುತ್ತಿರುವ ಆರ್ತರಿಂದ ಆ ಮಗನನನ್ನು ಎಳೆದು ವಿಧಿವತ್ತಾಗಿ ಅವನನ್ನು ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ಅವನ ದೇಹವನ್ನು ಆಹುತಿಯನ್ನಾಗಿ ಕೊಡುತ್ತಿರುವಾಗ ಆರ್ತ ತಾಯಂದಿರು ಆ ಹೊಗೆಯನ್ನು ಸೇವಿಸಿ ತಕ್ಷಣವೇ ಭುಮಿಯ ಮೇಲೆ ಉರುಳಿ ಬಿದ್ದರು. ಅನಂತರ ರಾಜನ ಪತ್ನಿಯರೆಲ್ಲರೂ ಗರ್ಭವತಿಯರಾದರು. ಹತ್ತು ತಿಂಗಳಿನ ನಂತರ ಸೋಮಕನಿಗೆ ಅವರೆಲ್ಲರಲ್ಲಿ ಸಂಪೂರ್ಣವಾಗಿ ಒಂದು ನೂರು ಮಕ್ಕಳು ಜನಿಸಿದರು. ಅದೇ ತಾಯಿಯಲ್ಲಿ ಜಂತುವು ಹಿರಿಯವನಾಗಿ ಜನಿಸಿದನು. ಮತ್ತು ಅವರೆಲ್ಲರೂ ತಮ್ಮದೇ ಮಕ್ಕಳಿಗಿಂತ ಅಧಿಕವಾಗಿ ಅವನನ್ನು ಪ್ರೀತಿಸಿದರು. ಅವನ ಎಡಭಾಗದಲ್ಲಿ ಬಂಗಾರದ ಚಿಹ್ನೆಯಿತ್ತು. ಗುಣಗಳಿಂದ ಸಮಾಯುಕ್ತನಾಗಿ ಅವನು ನೂರು ಮಕ್ಕಳಲ್ಲಿ ಅಗ್ರನೆನಿಸಿಕೊಂಡನು.

ಅನಂತರ ಸೋಮಕನ ಗುರುವು ಪರಮ ಲೋಕವನ್ನು ಸೇರಿದನು. ಕಾಲಕಳೆದಂತೆ ಸೋಮಕನೂ ಕೂಡ ಪರಮ ಗತಿಯನ್ನು ಹೊಂದಿದನು. ಅಲ್ಲಿ ಗುರುವು ಘೋರ ನರಕದಲ್ಲಿ ಸುಡುತ್ತಿರುವುದನ್ನು ಕಂಡನು. ಆಗ ನೀನು ಏಕೆ ನರಕದಲ್ಲಿ ಸುಡುತ್ತಿದ್ದೀಯೆ ಎಂದು ರಾಜನು ಆ ದ್ವಿಜನನ್ನು ಕೇಳಿದನು. ಅಗ್ನಿಯಲ್ಲಿ ಚೆನ್ನಾಗಿ ಸುಡುತ್ತಿರುವ ಅವನ ಗುರುವು ಹೇಳಿದನು: “ರಾಜನ್! ನಿನಗೋಸ್ಕರ ನಾನು ಆ ಯಜ್ಞವನ್ನು ನಡೆಸಿದೆ. ಆ ಕರ್ಮದ ಫಲವೇ ಇದು!”

ಇದನ್ನು ಕೇಳಿದ ಆ ರಾಜರ್ಷಿಯು ಧರ್ಮರಾಜನಿಗೆ ಹೇಳಿದನು: “ನನ್ನ ಯಾಜಕನನ್ನು ಬಿಡುಗಡೆಮಾಡು. ನಾನು ಅವನ ಜಾಗಕ್ಕೆ ಹೋಗುತ್ತೇನೆ. ನನಗಾಗಿ ಮಾಡಿದ ಕಾರ್ಯದಿಂದಲೇ ಆ ಮಹಾಭಾಗನು ನರಕಾಗ್ನಿಯಲ್ಲಿ ಸುಡುತ್ತಿದ್ದಾನೆ.”

ಧರ್ಮನು ಹೇಳಿದನು: “ರಾಜನ್! ಒಬ್ಬನು ಮಾಡಿದುದರ ಫಲವನ್ನು ಇನ್ನೊಬ್ಬನು ಎಂದೂ ಅನುಭವಿಸುವುದಿಲ್ಲ. ನೀನು ನೋಡುತ್ತಿರುವುದು ನಿನ್ನ ಫಲಗಳು.”

ಸೋಮಕನು ಹೇಳಿದನು: “ಈ ಬ್ರಹ್ಮವಾದಿನಿಯಿಲ್ಲದೇ ನಾನು ಲೋಕದ ಪುಣ್ಯಗಳನ್ನು ಬಯಸುವುದಿಲ್ಲ. ಧರ್ಮರಾಜ! ಇವನೊಟ್ಟಿಗೆ ವಾಸಿಸಲು – ಸುರಾಲಯವಿರಲಿ ಅಥವಾ ನರಕದಲ್ಲಿರಲಿ – ಬಯಸುತ್ತೇನೆ. ಇವನ ಕರ್ಮವೂ ನನ್ನ ಕರ್ಮವೂ ಒಂದೇ. ಪುಣ್ಯವಾಗಿರಲಿ ಅಪುಣ್ಯವಾಗಿರಲಿ ನಾವಿಬ್ಬರು ಒಂದೇ ಫಲವನ್ನು ಹಂಚಿಕೊಳ್ಳಬೇಕು.”

ಧರ್ಮನು ಹೇಳಿದನು: “ರಾಜನ್! ಅದನ್ನೇ ನೀನು ಬಯಸುವೆಯಾದರೆ ಅವನೊಂದಿಗೆ ಅವನ ಫಲವನ್ನು ಅಷ್ಟೇ ಕಾಲ ಅನುಭವಿಸು. ಅನಂತರ ಸದ್ಗತಿಯನ್ನು ಹೊಂದುತ್ತೀಯೆ.”

ಆ ರಾಜೀವಲೋಚನ ರಾಜನು ಹಾಗೆಯೇ ಎಲ್ಲವನ್ನೂ ಮಾಡಿದನು ಮತ್ತು ಗುರುಪ್ರಿಯನಾದ ಅವನು ಆ ವಿಪ್ರ ಗುರುವಿನೊಂದಿಗೆ ಪುನಃ ತನ್ನ ಕರ್ಮಗಳಿಂದ ಗೆದ್ದಿದ್ದ ಶುಭ ಲೋಕಗಳನ್ನು ಪಡೆದನು.

ಹಿಂದಿನ ಲೇಖನಬಂಗಾರಪೇಟೆ: ಹಳಿತಪ್ಪಿದ ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌’ಪ್ರೆಸ್ ರೈಲು
ಮುಂದಿನ ಲೇಖನಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಯಲ್ಲಿ ಅಪ್ರಾಪ್ತೆ ಸಾವು: ತೀವ್ರಗೊಂಡ ತನಿಖೆ