‘ಡಾನ್ 3’ ಸಿನಿಮಾದ ಒಪ್ಪಂದದಿಂದ ಹಿಂದೆ ಸರಿದ ಪ್ರಕರಣಕ್ಕೆ ಸಂಬಂಧಿಸಿ ನಟ ರಣ್ವೀರ್ ಸಿಂಗ್ ವಿರುದ್ಧ ಸಿನಿಮಾ ಕಾರ್ಮಿಕರ ಒಕ್ಕೂಟ ಅಸಹಕಾರ ಘೋಷಿಸಿರುವ ವಿಚಾರ ಇದೀಗ ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಪ್ಪಂದ ಉಲ್ಲಂಘನೆ ಮಾಡಿದಷ್ಟೇ ಅಲ್ಲದೆ, ಚಿತ್ರದ ಪ್ರೀ ಪ್ರೊಡಕ್ಷನ್ ವೆಚ್ಚವನ್ನು ಭರಿಸಲು ಕೂಡ ರಣ್ವೀರ್ ಸಿಂಗ್ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್, ಸಿನಿಮಾ ಒಕ್ಕೂಟದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಈ ವಿವಾದದ ನಡುವೆ ನಟ ರಣ್ವೀರ್ ಸಿಂಗ್ ವಿರುದ್ಧ ಹೇರಲಾಗಿರುವ ಅನಧಿಕೃತ ನಿಷೇಧ ಕುರಿತು ಹಲವು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಖ್ಯಾತ ಲೇಖಕಿ ಶೋಭಾ ಡೇ ಕೂಡ ಈ ವಿಚಾರವಾಗಿ ಮಾತನಾಡಿದ್ದು, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸನ್ನು ಸಹಿಸದ ಕೆಲವರು ರಣ್ವೀರ್ ವಿರುದ್ಧ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಶೋಭಾ ಡೇ, ಫರ್ಹಾನ್ ಅಖ್ತರ್ ಜೊತೆಗಿನ ವಿವಾದವನ್ನು ರಣ್ವೀರ್ ಸಿಂಗ್ ಅತ್ಯಂತ ಸಮತೋಲನದಿಂದ ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗ ಕಾರ್ಮಿಕರ ಒಕ್ಕೂಟ ಎಫ್ಡಬ್ಲುಐಸಿಇ (FWICE) ಕೈಗೊಂಡಿರುವ ಅಸಹಕಾರ ಕ್ರಮವು ಕೇವಲ ರಣ್ವೀರ್ ಸಿಂಗ್ ವಿರುದ್ಧವಲ್ಲ, ಇತ್ತೀಚೆಗೆ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಆದಿತ್ಯ ಧರ್ ಹಾಗೂ ಅವರ ತಂಡವನ್ನು ಗುರಿಯಾಗಿಸಿಕೊಂಡಿರುವ ಸಂಚು ಎಂದು ಅವರು ಹೇಳಿದ್ದಾರೆ.
ಈ ವಿವಾದವನ್ನು ದೆಹಲಿಯ ಖ್ಯಾತ ‘ಜಿಮ್ಖಾನಾ ಕ್ಲಬ್’ ಪ್ರಕರಣಕ್ಕೆ ಹೋಲಿಸಿರುವ ಶೋಭಾ ಡೇ, “ಇದು ಅಧಿಕಾರ ಮತ್ತು ನಿಯಂತ್ರಣದ ಆಟ. ರಣ್ವೀರ್ ಸಿಂಗ್ ಬುದ್ಧಿವಂತ ನಟ. ಅವರು ಈ ವಿಷಯದಲ್ಲಿ ಮೌನವಾಗಿದ್ದು, ತಮ್ಮ ಅಭಿಮಾನಿಗಳೇ ತಮ್ಮ ಪರವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಒಕ್ಕೂಟವು ದೇಶದ ಜನಪ್ರಿಯ ನಟನಿಗೆ ಸ್ಟುಡಿಯೋ ಪ್ರವೇಶ ನಿರಾಕರಿಸುವ ಮೂಲಕ ತಮ್ಮ ಪ್ರಭಾವ ತೋರಿಸಲು ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಯಾವುದೇ ತಪ್ಪಿಲ್ಲದ ಅನೇಕ ತಂತ್ರಜ್ಞರು ಮತ್ತು ಕಾರ್ಮಿಕರ ಉದ್ಯೋಗಕ್ಕೆ ಹೊಡೆತ ಬೀಳುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ರಣ್ವೀರ್ ಸಿಂಗ್, ಫರ್ಹಾನ್ ಅಖ್ತರ್ ಹಾಗೂ ಎಕ್ಸೆಲ್ ಎಂಟರ್ಟೈನ್ಮೆಂಟ್ ನಡುವೆ ಭಿನ್ನಾಭಿಪ್ರಾಯ ಇದ್ದರೆ, ಕಾನೂನು ಮಾರ್ಗದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಚಿತ್ರರಂಗದ ಸಂಘಟನೆಗಳನ್ನು ಇದರಲ್ಲಿ ಎಳೆದು ತರುವುದು ಸರಿಯಲ್ಲ” ಎಂದು ಶೋಭಾ ಡೇ ಕಿಡಿಕಾರಿದ್ದಾರೆ.


















