ಮನೆ ಸುದ್ದಿ ಜಾಲ ದಂಪತಿ ಬೈಕ್ ಮೇಲೆ ಹರಿದ ಟಿಪ್ಪರ್​ ಲಾರಿ ಸ್ಥಳದಲ್ಲೇ ಪತಿ ಸಾವು, ಪತ್ನಿ ಗಂಭೀರ  

ದಂಪತಿ ಬೈಕ್ ಮೇಲೆ ಹರಿದ ಟಿಪ್ಪರ್​ ಲಾರಿ ಸ್ಥಳದಲ್ಲೇ ಪತಿ ಸಾವು, ಪತ್ನಿ ಗಂಭೀರ  

0

ಆನೇಕಲ್(ಬೆಂಗಳೂರು): ಆನೇಕಲ್​ ಪಟ್ಟಣದಲ್ಲಿ ರಸ್ತೆ ಬದಿ ಬೈಕ್​ ನಿಲ್ಲಿಸುವ ವೇಳೆ ದಂಪತಿ ಮೇಲೆ ಲಾರಿ ಹರಿದು, ಪತಿ ಸಾವನ್ನಪ್ಪಿದರೆ, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ. ಆನೇಕಲ್ ಹುಸ್ಕೂರು ಬಳಿಯ ಹಾರೋಹಳ್ಳಿ ಗ್ರಾಮದ 40 ವರ್ಷದ ಮಂಜುನಾಥ್ ರೆಡ್ಡಿ ಸಾವನ್ನಪ್ಪಿದವರು. ಅವರ ಪತ್ನಿ 36 ವರ್ಷದ ಪ್ರತಿಭಾ ಗಂಭೀರವಾಗಿ ಗಾಯಗೊಂಡವರು. ಆನೇಕಲ್ ಪಟ್ಟಣದ ಮಿರ್ಜಾರಸ್ತೆಯ ಅಪೋಲೋ ಮೆಡಿಕಲ್ ಶಾಪ್ ಮುಂದಿನ ರಸ್ತೆಯಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಈ ಕುರಿತು ದಂಪತಿ ಕೃಷಿ ಔಷಧ ಖರೀದಿಸಲು ಆನೇಕಲ್ ಪಟ್ಟಣಕ್ಕೆ ಬಂದಿದ್ದರು. ಹಿಂಬದಿಯಿಂದ ವೇಗವಾಗಿ ಬಂದ ಲಾರಿಯನ್ನು ತಪ್ಪಿಸಲು ಬೈಕ್​ ಅನ್ನು ಎಡಕ್ಕೆ ಸ್ವಲ್ಪ ಬಾಗಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ತಾಕಿ ಲಾರಿಯಡಿಗೆ ದಂಪತಿ ಬಿದ್ದಿದ್ದಾರೆ. ರಸ್ತೆ ಪಕ್ಕದಲ್ಲಿ ಎಡರಸ್ತೆಗೆ ತುಸು ಅಡ್ಡಲಾಗಿ ನಿಲ್ಲಿಸಿದ್ದ ಬೈಕ್​ಗಳ ಗುಂಪು ಹಾಗೂ ಬಲಗಡೆ ಬದಿಯಲ್ಲಿ ಬಂದ ಲಾರಿಯ ನಡುವೆ ಇವರ ಬೈಕ್ ಸಿಲುಕಿದೆ. ಆಗ ಕೆಳಗೆ ಬಿದ್ದ ದಂಪತಿ ಮೇಲೆ ಲಾರಿ ಹರಿದು, ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೊಮ್ಮಸಂದ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿ ಮುನಿರಾಜ ರೆಡ್ಡಿ ಮಾತನಾಡಿ, ಅಪೋಲೋ ಮೆಡಿಕಲ್​ ಮುಂದೆ ತುಂಬಾ ಬೈಕ್​ಗಳಿದ್ದವು. ರಸ್ತೆಯಲ್ಲಿ ಲಾರಿ ಹೋಗುತ್ತಿತ್ತು. ಅವರು ಬರಬೇಕಾದರೆ ಸೈಡ್​ ಹೊಡ್ಕೊಂಡು ಬಂದ್ರು, ಸೈಡ್​ಲ್ಲಿ ನಿಲ್ಲಿಸಿದ್ದ ಬೈಕ್​ಗಳಿಗೆ ಇವರ ಬೈಕ್​ ತಾಗಿ ಅವರು ಲಾರಿ ಬರುತ್ತಿದ್ದ ಕಡೆಗೆ ಬಿದ್ದದ್ದಾರೆ. ಲಾರಿ ತಕ್ಷಣ ನಿಲ್ಲಿಸಿದ್ದಾರೆ.

ಹಾಗಾಗಿ ಎರಡು ಚಕ್ರಗಳ ಮಧ್ಯೆ ಸಿಲುಕಿದ್ದವರನ್ನು ನಾವು ಹೊರಗೆ ತೆಗೆದೆವು. ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದಿದ್ದೇವೆ. ಆಂಬ್ಯಲೆನ್ಸ್​ ಬರೋದು ತುಂಬಾ ತಡವಾಗಿತ್ತು ಎಂದು ತಿಳಿಸಿದರು. ಮೃತರ ಸಂಬಂದಿ ಕಾರ್ತಿಕ್ ರೆಡ್ಡಿ ಮಾತನಾಡಿ, ಪ್ರತಿಭಾ ನನ್ನ ಚಿಕ್ಕಪ್ಪನ ಮಗಳು, ಅವಳ ಗಂಡ ಮಂಜುನಾಥ್​ ರೆಡ್ಡಿ ಅಲ್ಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರೋ ತಂಗಿಯನ್ನ ಆಸ್ಪತ್ರೆಗೆ ಸೇರಿಸಿದ್ದೇವೆ. ನಮ್ಮೂರಲ್ಲಿ ಈ ಥರ ಆಗಿರೋದು ಇದು ಮೊದಲಲ್ಲ. ಇದು ಎರಡನೇ ಪ್ರಕರಣ. ಸುತ್ತಮುತ್ತವೂ ಇದೇ ರೀತಿ ಆಗಿದೆ. ಟಿಪ್ಪರ್​ ಲಾರಿಗಳನ್ನು ಆನೇಕಲ್​ ಒಳಗಡೆ ಬರದಂತೆ ತಡೆಯಿರಿ ಎಂದು ಹೇಳಿದರೆ, ಇವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ರಸ್ತೆಯೂ ತುಂಬಾ ಕಿರಿದಾಗಿದೆ. ರಸ್ತೆ ಬದಿಯಲ್ಲಿದ್ದವರು ಸ್ವಲ್ಪ ತಾಗಿ ಬಿದ್ದರೂ, ಅವರು ಬೀಳೋದು ಲಾರಿ ಕೆಳಗಡೆ. ಅಷ್ಟೇ ಅಲ್ಲ, ಅಂಗಡಿಗೆ ಬರೋರು ಎಲ್ಲರೂ ರಸ್ತೆಯಲ್ಲೇ ಗಾಡಿಗಳನ್ನು ನಿಲ್ಲಿಸುತ್ತಾರೆ. ಇದನ್ನು ಯಾರೂ ಕೇಳೋರಿಲ್ಲ ಎಂದು ಹೇಳಿದರು. ತಕ್ಷಣ ಆಂಬ್ಯುಲೆನ್ಸ್​ಗೆ ಎಷ್ಟೇ ಕರೆ ಮಾಡಿದರೂ ಬಾರದೇ ಇದ್ದದ್ದೆ ಸಾವಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಧಾವಿಸಿದ ಸುತ್ತಲ ಅಂಗಡಿಗಳವರು ಪೊಲೀಸರು ಸೇರಿ ಇಬ್ಬರನ್ನೂ ಆಸ್ಪತ್ರೆಗೆ ಕಳಿಸಿಕೊಟ್ಟರು. ಸ್ಥಳದಲ್ಲಿದ್ದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಲಾರಿಯನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ. ನಂತರ ಪುರಸಭಾ ಸಿಬ್ಬಂದಿಯೊಂದಿಗೆ ಇನ್​ಸ್ಪೆಕ್ಟರ್ ಪ್ರಕಾಶ್, ರಸ್ತೆ ಒತ್ತುವರಿ ತೆರವುಗೊಳಿಸಿದರು ಎಂದು ತಿಳಿದುಬಂದಿದೆ.