ಮನೆ ಮನರಂಜನೆ  ‘ಡೇರ್​ ಡೆವಿಲ್​ ಮುಸ್ತಫಾ’ ಚಿತ್ರ ವಿಮರ್ಶೆ

 ‘ಡೇರ್​ ಡೆವಿಲ್​ ಮುಸ್ತಫಾ’ ಚಿತ್ರ ವಿಮರ್ಶೆ

0

ನಿರ್ಮಾಣ: ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು

ನಿರ್ದೇಶನ: ಶಶಾಂಕ್​ ಸೋಗಾಲ್​

ಪಾತ್ರವರ್ಗ: ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದವರು.

ಸ್ಟಾರ್​: 3.5/5

Join Our Whatsapp Group

ಒಂದು ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಆಧರಿಸಿದ ಸಿನಿಮಾಗಳನ್ನು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದವು. ಇತ್ತೀಚೆಗೆ ಆ ಟ್ರೆಂಡ್​ ಕಡಿಮೆ ಆಗಿದೆ. ಅಪರೂಪ ಎಂಬಂತೆ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ.

 ಕರುನಾಡು ಕಂಡ ವಿಶೇಷ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದಾರೆ. ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದಾರೆ. ಹೊಸ ಕಲಾವಿದರ ಅಭಿನಯ ಗಮನ ಸೆಳೆಯುತ್ತಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಆಗುವಂತಿವೆ. ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯಲ್ಲೂ ಆ ಗುಣವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋಮುದ್ವೇಷ ರಾರಾಜಿಸುತ್ತಿದೆ. ಅನಗತ್ಯವಾಗಿ ಧರ್ಮಗಳ ನಡುವೆ ಜಗಳ ಸೃಷ್ಟಿ ಆಗುತ್ತಲೇ ಇದೆ. ಅದೆಲ್ಲ ಎಷ್ಟು ಕ್ಷುಲ್ಲಕ ಎಂಬುದನ್ನು ತಿಳಿಸುವ ರೀತಿಯಲ್ಲಿ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ.

ಈ ಕಥೆ ಸಾಗುವುದು ರೆಟ್ರೋ ಕಾಲದಲ್ಲಿ. ಮೊಬೈಲ್​, ಇಂಟರ್​ನೆಟ್​ ಇತ್ಯಾದಿ ಹಾವಳಿ ಇಲ್ಲದ ಕಾಲಘಟ್ಟವನ್ನು ಇಂದಿನ ಸಿನಿಮಾಗಳಲ್ಲಿ ತೋರಿಸುವುದು ಅಷ್ಟು ಸುಲಭವಲ್ಲ. ಆ ಸವಾಲನ್ನು ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರೇಕ್ಷಕರನ್ನು ಅವರು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತಾರೆ.

ಒಂದೇ ಊರಿನಲ್ಲಿ ಎರಡು ಬೇರೆ ಬೇರೆ ಧರ್ಮದ ಜನರು ಇದ್ದಾಗ ಸಾಮಾನ್ಯವಾಗಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅದರಿಂದಾಗಿ ಜಗಳಗಳು ಉಂಟಾಗುವುದು ಕೂಡ ಸಹಜ. ಆದರೆ ಹೊಂದಿಕೊಂಡು ಬಾಳಿದರೆ ಒಗ್ಗಟ್ಟಿನಿಂದ ಉತ್ತಮ ಸಮಾಜವನ್ನು ಕಟ್ಟಬಹುದು ಎಂಬ ಸಂದೇಶ ಈ ಸಿನಿಮಾದಲ್ಲಿದೆ. ಆದರೆ ಅದನ್ನು ಒಂದು ಪಾಠದ ರೀತಿ ಹೇಳಿಲ್ಲ. ನಕ್ಕು ನಗಿಸುವಂತಹ ಲವಲವಿಕೆಯ ದೃಶ್ಯಗಳ ಮೂಲಕ ಎಲ್ಲವನ್ನೂ ಪ್ರೇಕ್ಷಕರ ಎದೆಗೆ ದಾಟಿಸಲಾಗಿದೆ.

ಬರೀ ಹಿಂದೂಗಳೇ ತುಂಬಿರುವ ಕಾಲೇಜಿಗೆ ಒಬ್ಬನೇ ಒಬ್ಬ ಮುಸ್ಲಿಂ ಹುಡುಗ ಸೇರಿಕೊಂಡರೆ ಏನಾಗುತ್ತದೆ? ಅದರಲ್ಲೂ ಮುಸ್ಲಿಂ ಸಮುದಾಯದ ಬಗ್ಗೆ ಹಿಂದೂ ಹುಡುಗರಿಗೆ ಪೂರ್ವಾಗ್ರಗಳು ತುಂಬಿಕೊಂಡಿದ್ದರೆ ಏನಾಗಬಹುದು? ಇಂಥ ಬಿಗುವಿನ ವಾತಾವರಣದಲ್ಲಿ ಒಂದು ಚಿಕ್ಕ ಲವ್​ ಸ್ಟೋರಿಯೂ ಹುಟ್ಟಿಕೊಂಡರೆ ಏನಾದೀತು? ಅದೂ ಸಾಲದೆಂಬಂತೆ ಕಾಲೇಜಿನ ಹಿಂದೂ ಹುಡುಗರ ವಿರುದ್ಧ ಅದೇ ಊರಿನ ಮುಸ್ಲಿಂ ಕೇರಿಯ ಯುವಕರು ಬಾಜಿ ಕಟ್ಟಿ ಕ್ರಿಕೆಟ್​ ಆಡಲು ಬಂದರೆ ಏನೆಲ್ಲ ನಡೆಯಬಹುದು? ಈ ಎಲ್ಲ ಸೂಕ್ಷ್ಮವಾದ ವಿಚಾರಗಳು ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿದೆ. ಈ ಎಲ್ಲವನ್ನೂ ಕೂಡ ನಿರ್ದೇಶಕರು ಎಂಬ ಕಾಳಜಿ, ಎಚ್ಚರಿಕೆಯಿಂದ ಕಟ್ಟಿಕೊಟ್ಟಿದ್ದಾರೆ.

ಈ ಚಿತ್ರದ ಅವಧಿ 2 ಗಂಟೆ 40 ನಿಮಿಷ. ಆದರೂ ಕೂಡ ಎಲ್ಲಿಯೂ ಬೋರು ಹೊಡೆಸದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಹುಡುಗರ ತರಲೆ-ತಮಾಷೆಯ ಜೊತೆ ಸಾಗುವ ನಿರೂಪಣೆ ಇಷ್ಟ ಆಗುತ್ತದೆ. ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟಿಸಿದ ಆದಿತ್ಯ ಆಶ್ರೀ ಮತ್ತು ಮುಸ್ತಫಾ ಪಾತ್ರದಲ್ಲಿ ಅಭಿನಯಿಸಿದ ಶಿಶಿರಾ ಬೈಕಾಡಿ ನಡುವಿನ ಜಿದ್ದಾ ಜಿದ್ದಿ ದೃಶ್ಯಗಳು ಮಸ್ತ್​ ಮನರಂಜನೆ ನೀಡುತ್ತವೆ. ಮಂಡ್ಯ ರಮೇಶ್​, ಉಮೇಶ್​, ನಾಗಭೂಷಣ್​ ಮುಂತಾದವರು ಕೂಡ ನಗುವಿನ ಕಚಗುಳಿ ಇಡುತ್ತಾರೆ. ರಮಾಮಣಿ ಪಾತ್ರ ಮಾಡಿದ ಪ್ರೇರಣಾ ಕೂಡ ಗಮನ ಸೆಳೆಯುತ್ತಾರೆ. ಅಯ್ಯಂಗಾರಿ ಪಟಾಲಂ ಕೂಡ ಚಪ್ಪಾಳೆ ಗಿಟ್ಟಿಸುತ್ತದೆ.

ಹಿಂದಿನ ಲೇಖನಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್ ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ: ನಾಲ್ವರ ಬಂಧನ
ಮುಂದಿನ ಲೇಖನನೋಟರಿ ವಕೀಲರನ್ನು ನೇಮಕ ಮಾಡಲು ಲಂಚ ಪಡೆಯುತ್ತಿದ್ದ ಕೇಂದ್ರ ಸರ್ಕಾರದ ಕಾನೂನು ಸಲಹೆಗಾರ ಬಂಧನ