ಮನೆ ದೇವರ ನಾಮ ತಪ್ಪುಗಳೆಲ್ಲವ ಪರಿಹರಿಸುವ

ತಪ್ಪುಗಳೆಲ್ಲವ ಪರಿಹರಿಸುವ

0

ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು ||ಪ||

ಅಷ್ಟಾದರು ಎನ್ನವಗುಣ ಎಣಿಸದೆ ಸತ್ಯ ಸಂಕಲ್ಪ ತಿಮ್ಮಪ್ಪ ನೀನು ||ಅ||

ಬೆಳಗಿನ ಝಾವದಿ ಹರಿಯ ಸ್ಮರಣೆಯ ಮಾಡದಿರುವುದು ತಪ್ಪು

ಮಲಮೂತ್ರ ವಿಸರ್ಜನೆ ಮೃತ್ತಿಕೆಯಲಿ ಮಲವ ತೊಳೆಯದಿರುವುದು ತಪ್ಪು

ತುಳಸಿ ವೃಂದಾವನ ಗೋಸೇವೆಗೆ ಆಲಸ್ಯ ಮಾಡುತಲಿರುವುದು ತಪ್ಪು

ನಳಿನ ಸಹೋದರನಿಗರ್ಘ್ಯವನೀಯದೆ ಕಲಿ ವ್ಯಾಸಂಗದಲಿರುವುದು ತಪ್ಪು ||

ದಿನದಿನ ಉದಯ ಸ್ನಾನ ಮಾಡದ ತನು ವಂಚನೆಯಾ ತಪ್ಪು

ಮುನಿಸುರ ಭೂಸುರರಾರಾಧಿಸದೆ ಧನ ವಂಚನೆಯ ತಪ್ಪು

ಕ್ಷಣ ಗುಣ ಜಿಜ್ಞಾಸಿಲ್ಲದೆ ದುರ್ಜನರ ಸಂಸರ್ಗದ ತಪ್ಪು

ವನಜಾಕ್ಷ ನಿನ್ನ ಧ್ಯಾನವ ಮಾಡದೆ ಮನ ವಂಚನೆಯ ತಪ್ಪು ||

ಕಣ್ಣಿಲಿ ಕೃಷ್ಣಾಕೃತಿಯ ನೋಡದೆ ಪರಹೆಣ್ಣಿನ ನೋಡಿದ ತಪ್ಪು

ಅನ್ನವನರ್ಪಿಸದೆ ಅಜ್ಞಾನದಿ ಉಣ್ಣುವ ನಾಲಿಗೆ ತಪ್ಪು

ನಿನ್ನ ಕಥಾಮೃತವಿಲ್ಲದೆ ಹರಟೆಯ ಮನ್ನಿಸುವ ಕಿವಿ ತಪ್ಪು

ಚಿನ್ಮಯ ಮೂರುತಿ ಚರಣೆಕ್ಕೆರಗದೆ ಉನ್ಮತ್ತೆಯ ತಪ್ಪು ||

ಆನಂದನ ಸಂಕೀರ್ತನೆ ಮಾಡದೆ ಹೀನ ವಿವಾದದ ತಪ್ಪು

ಶ್ರೀನಾಥಾರ್ಚನೆ ಇರಲೂಳಿಗವ ಮಾಡಿದ ಕೈಯ ತಪ್ಪು

ಶ್ರೀನಿರ್ಮಾಲ್ಯ ವಿರಹಿತ ಸುರಭಿಯ ಘ್ರಾಣದ ನಾಸಿಕ ತಪ್ಪು

ಶ್ರೀ ನಾರಾಯಣನ ವೇಷಗೆಯ್ಯದನ ನಟನೆ ಪಾದದ ತಪ್ಪು ||

ಯಜ್ಞಾತ್ಮಗೆ ಯಜ್ಞವರ್ಪಿಸದೆ ಕಾಮ್ಯ ಯಜ್ಞಮಾಡಿದ ತಪ್ಪು

ಅಜ್ಞಾನ ಜ್ಞಾನದಲಿ ಕ್ಷಣ ಕ್ಷಣ ಅಘಗಳ ಗಳಿಸುವ ತಪ್ಪು

ಆಗತ ಶೌಚದ ಕರ್ಮವ ಜರೆದು ಸಮಗ್ರ ಗುಹ್ಯದ ತಪ್ಪು

ಯಜ್ಞೇಶ ಮಧ್ವಪತಿ ಪುರಂದರವಿಠಲನ ವಿಸ್ಮರಣೆಯ ತಪ್ಪು ||

ಹಿಂದಿನ ಲೇಖನಶಿಕ್ಷಕರು ದೇವರಿಗೆ ಸಮ ಎಂದ ಹೈಕೋರ್ಟ್; ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜಾಮೀನು ನಿರಾಕರಣೆ
ಮುಂದಿನ ಲೇಖನಥೈರಾಯ್ಡ್ ಆರೋಗ್ಯವನ್ನು ಸುಧಾರಿಸಲು 7 ಭಾರತೀಯ ಗಿಡಮೂಲಿಕೆಗಳು