ಹಾಸನ: ಸಾಲದ ವಿಚಾರವಾಗಿ ನಡೆದ ಜಗಳದಲ್ಲಿ ಪತ್ನಿ ಹಾಗು ಪುತ್ರ ಸೇರಿಕೊಂಡು ವ್ಯಕ್ತಿಯನ್ನು ಕೊಲೆಗೈದ ಆರೋಪ ಪ್ರಕರಣ ಇತ್ತೀಚಿಗೆ ಹಾಸನದಲ್ಲಿ ನಡೆದಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ಮೃತಪಟ್ಟ ವ್ಯಕ್ತಿಯ ತಾಯಿ ನೀಡಿದ ದೂರಿನ ಮೇರೆಗೆ ಇಂದು ಹೂತಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹಾಸನದ ತಣ್ಣೀರುಹಳ್ಳದಲ್ಲಿ ಹೋಟೆಲ್ ನಡೆಸುತ್ತಿದ್ದ ಗುರುಮೂರ್ತಿ (44) ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ವ್ಯಾಪಾರ ಹಾಗೂ ಇನ್ನಿತರ ಕಾರಣಗಳಿಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಪತ್ನಿ ವೀಣಾ (40) ಹಾಗೂ ಗುರುಮೂರ್ತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು ಮೇ 14ರಂದು ಮೈಸೂರಿನಲ್ಲಿರುವ ತಾಯಿ ಮನೆಗೆ ಗುರುಮೂರ್ತಿ ಹೋಗಿದ್ದರು. ಆ ವೇಳೆ ಹೊಟ್ಟೆಗೆ ನೋವು ನಿವಾರಕ ಬ್ಯಾಂಡೇಜ್ ಹಾಕಿಕೊಂಡಿರುವುದನ್ನು ತಾಯಿ ಗಮನಿಸಿ, ವಿಚಾರಿಸಿದಾಗ ಪತ್ನಿ ಹಾಗೂ ಪುತ್ರ ಹಲ್ಲೆ ಮಾಡಿದ್ದಾಗಿ ಗುರುಮೂರ್ತಿ ತಿಳಿಸಿದ್ದರು ಎಂದು ತಿಳಿದುಬಂದಿದೆ.
ಈ ಕುರಿತ್ತಾಗಿ ಮೇ 15ರಂದು ಮೈಸೂರಿನಿಂದ ಹಾಸನಕ್ಕೆ ವಾಪಸಾಗಿದ್ದ ಗುರುಮೂರ್ತಿ, ಮೇ 18ರಂದು ಮನೆಯಲ್ಲಿ ಸಾವನ್ನಪ್ಪಿದ್ದರು. ಅಂದೇ ಹಾಸನದ ಬಿಟ್ಟಗೋಡನಹಳ್ಳಿ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಗುರುಮೂರ್ತಿ ಸಾವಿನ ಬಳಿಕ ಅವರ ಮಾವನ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಮೇ 17ರಂದು ರಾತ್ರಿ ಗುರುಮೂರ್ತಿ ಅವರ ಮೇಲೆ ಪತ್ನಿ ವೀಣಾ ಹಾಗೂ ಪುತ್ರ ತೀವ್ರವಾಗಿ ಹಲ್ಲೆ ನಡೆಸುವ ದೃಶ್ಯ ಸೆರೆಯಾಗಿತ್ತು. ಹಲ್ಲೆಯ ತೀವ್ರತೆಗೆ ಗುರುಮೂರ್ತಿ ಮನೆಯಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಪತ್ನಿ ಮತ್ತು ಪುತ್ರ ಸೇರಿ ಅವರನ್ನು ಎತ್ತಿ ಮಂಚದ ಮೇಲೆ ಮಲಗಿಸಿರುವುದು ಕೂಡಾ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದೇ ಹಲ್ಲೆಯಿಂದಾಗಿ ಮೇ 18ರಂದು ಗುರುಮೂರ್ತಿ ಸಾವನ್ನಪ್ಪಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಯಿ ರೇಣುಕಾ ಅವರು, ಸೊಸೆ ವೀಣಾ ಹಾಗೂ ಅಪ್ರಾಪ್ತ ಪುತ್ರನೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೇ 25ರಂದು ಹಾಸನ ನಗರ ಪೊಲೀಸರಿಗೆ ದೂರು ನೀಡಿದ್ದರು.
ಆದರಿಂದ ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು, ಇಂದು ಹಾಸನ ನಗರದ ಬಿಟ್ಟಗೋಡನಹಳ್ಳಿ ಸ್ಮಶಾನದಿಂದ ಮೃತದೇಹ ಹೊರತೆಗೆದಿದ್ದಾರೆ. ಬಳಿಕ ಸ್ಥಳದಲ್ಲೇ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಮತ್ತೆ ಅದೇ ಜಾಗದಲ್ಲಿ ಶವ ಹೂತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂಬ ಮಾಹಿತಿ ತೀಳಿದುಬಂದಿದೆ.
















