ಜಿಲ್ಲೆಯ ರೈತರು, ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಯತ್ತ ಹೆಚ್ಚು ಒಲುವು ತೋರುತ್ತಿದ್ದಾರೆ. ಶುಂಠಿ ಬೆಳೆಯುವ ಹಲವು ಕಂಪನಿಗಳು ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಲಕ್ಷಾಂತರ ರೂಪಾಯಿ ನೀಡಿ ಕೃಷಿ ಜಮೀನು ಬಾಡಿಗೆ ಪಡೆಯುತ್ತಿವೆ. ಅದರ ಜೊತೆಯಲ್ಲಿ ರೈತರು ಸಹ ಶುಂಠಿ ಕೃಷಿಯಲ್ಲಿ ಪಳಗುತ್ತಿದ್ದಾರೆ. ಮಲೆನಾಡು ಹಾಗೂ ಬಯಲು ಸೀಮೆ ಎರಡೂ ಭೂ ಪ್ರದೇಶವನ್ನು ಹೊಂದಿರುವ ಜಿಲ್ಲೆಯಲ್ಲಿ ನಾನಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಆದರೆ, ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಹೆಚ್ಚಿನ ಪ್ರದೇಶವನ್ನು ವ್ಯಾಪಿಸಿದೆ. ಇದೀಗ ಶುಂಠಿ ಬೆಳೆ ಪ್ರದೇಶವೂ ಹೆಚ್ಚುತ್ತಿದೆ̤ ಶುಂಠಿಗೆ ಔಷಧೀಯ ಗುಣವಿದೆ. ಆಹಾರ ಪದಾರ್ಥಗಳ ತಯಾರಿ ಹಾಗೂ ಅಡುಗೆಗೆ ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದೇ ಕಾರಣಕ್ಕೆ ಶುಂಠಿಗೆ ಬೇಡಿಕೆ ಬಂದಿದೆ. ಅದರ ಜೊತೆಯಲ್ಲಿ ಪ್ರತಿ ವರ್ಷವೂ ದರವೂ ಉತ್ತಮವಾಗಿ ಸಿಗುತ್ತಿದೆ. ಹೀಗಾಗಿ, ರೈತರು ತಮ್ಮ ಜಮೀನುಗಳಲ್ಲಿ ಶುಂಠಿ ಬೆಳೆಯುತ್ತಿದ್ದಾರೆ. ಹಾವೇರಿ, ಹಾನಗಲ್, ಶಿಗ್ಗಾವಿ, ಬ್ಯಾಡಗಿ, ಹಾವೇರಿ, ಹಿರೇಕೆರೂರು, ರಟ್ಟಿಹಳ್ಳಿ, ಸವಣೂರು ತಾಲ್ಲೂಕಿನ ಶುಂಠಿ ಬೆಳೆ ಹೆಚ್ಚಿದೆ. ತೋಟಗಾರಿಕೆ ಬೆಳೆಗಳ ಕೃಷಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಸಹ ತೋಟಗಾರಿಕೆ ಬೆಳೆಯತ್ತ ರೈತರು ಒಲುವು ತೋರಲು ಕಾರಣವಾಗಿದೆ ಎನ್ನಲಾಗಿದೆ.
ಈ ಕುರಿತು ಜಿಲ್ಲೆಯಲ್ಲಿ ಶುಂಠಿ ಬೆಳೆ ಪ್ರದೇಶವು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2024-25ನೇ ಸಾಲಿನಲ್ಲಿ ಕೇವಲ 1,668.77 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು. ಆದರೆ, ಪ್ರಸಕ್ತ 2025-26ನೇ ಸಾಲಿನ ಮಾರ್ಚ್‌ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 4,222.03 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಶುಂಠಿ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಕೆಲ ರೈತರು ಮಾತ್ರ ಈ ಕೃಷಿ ಮಾಡುತ್ತಿದ್ದರು. ಈಗ, ಶುಂಠಿಗೆ ಹೆಚ್ಚಿನ ಲಾಭ ಸಿಗುತ್ತಿದೆ. ಇದೇ ಕಾರಣಕ್ಕೆ ರೈತರು, ಒಬ್ಬೊಬ್ಬರಾಗಿ ಶುಂಠಿ ಬೆಳೆಯಲು ಆರಂಭಿಸಿದ್ದಾರೆ. ಹೀಗಾಗಿ, ಶುಂಠಿ ಪ್ರದೇಶವೂ ಹೆಚ್ಚುತ್ತಿದೆ. ಜಮೀನುಗಳನ್ನು ಬಾಡಿಗೆ ಪಡೆದು ಶುಂಠಿ ಬೆಳೆಯುವ ಕಂಪನಿಗಳು, ಹಾವೇರಿ ಜಿಲ್ಲೆಗೆ ಲಗ್ಗೆ ಇಟ್ಟಿವೆ. ರೈತರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಕೊಡುತ್ತಿರುವ ಕಂಪನಿಗಳು, ಇಂತಿಷ್ಟು ವರ್ಷವೆಂದು ಕರಾರು ಮಾಡಿಕೊಂಡು ಶುಂಠಿ ಬೆಳೆಯುತ್ತಿವೆ. ಶಿಗ್ಗಾವಿ, ಹಾನಗಲ್, ಬ್ಯಾಡಗಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಕಂಪನಿಗಳು ಹೆಚ್ಚಿವೆ. ಖುದ್ದಾಗಿ ಕೃಷಿ ಮಾಡಿದರೆ ಹೆಚ್ಚು ಲಾಭಸಿಗುವುದಿಲ್ಲವೆಂದು ಭಾವಿಸಿರುವ ರೈತರು, ಕಂಪನಿಗಳಿಗೆ ಜಮೀನು ಬಾಡಿಗೆ ನೀಡುತ್ತಿದ್ದಾರೆ. ಒಂದೇ ಕಡೆ 100 ಹಾಗೂ ಅದಕ್ಕಿಂತ ಹೆಚ್ಚು ಎಕರೆ ಜಮೀನು ಬಾಡಿಗೆ ಪಡೆಯುತ್ತಿರುವ ಕಂಪನಿಗಳು, ಶುಂಠಿ ಬೆಳೆಯುತ್ತಿವೆ. ಉತ್ತಮ ಲಾಭವನ್ನೂ ಪಡೆಯುತ್ತಿವೆ. ‘ನಮ್ಮೂರಿನಲ್ಲಿ ಎಕರೆಗೆ ₹ 70 ಸಾವಿರದಿಂದ 1 ಲಕ್ಷದವರೆಗೂ ಕಂಪನಿಗಳು ಬಾಡಿಗೆ ನೀಡಿವೆ. ಹೀಗಾಗಿ, ಹಲವು ರೈತರು ತಮ್ಮ ಜಮೀನು ನೀಡಿದ್ದಾರೆ. ಜಮೀನಿನಲ್ಲಿ ಶುಂಠಿ ಹಾಕಲಾಗಿದೆ.
ನಿತ್ಯವೂ ಜಮೀನಿಗೆ ಹೋಗಿ ದುಡಿದು ಹಣ ಗಳಿಸುವುದಕ್ಕಿಂತ, ಮನೆಯಲ್ಲಿಯೇ ಕುಳಿತು ಹಣ ಬರುತ್ತಿದೆ’ ಎಂದು ಹೊಸೂರು ರೈತ ಭೀಮಪ್ಪ ಹೇಳಿದರು. ಸ್ವಂತ ಕೃಷಿಗೆ ಇಳಿದ ರೈತರು: ‘ಶುಂಠಿ ಬೆಳೆಯಲ್ಲಿ ದೊಡ್ಡ ಕಂಪನಿಗಳು ಆಸಕ್ತಿ ತೋರುತ್ತಿವೆ. ಇದರಲ್ಲಿ ಹೆಚ್ಚು ಲಾಭಇರಬಹುದು’ ಎಂದು ತಿಳಿದಿರುವ ರೈತರು, ಈಗ ಸ್ವತಂತ್ರವಾಗಿ ಶುಂಠಿ ಬೆಳೆಯಲು ಆರಂಭಿಸಿದ್ದಾರೆ. ಕಂಪನಿಗೆ ಜಮೀನು ನೀಡಿದ ರೈತರು, ಅವರಿಂದ ಜಮೀನು ವಾಪಸು ಪಡೆದು ತಾವೇ ಶುಂಠಿ ಬೆಳೆಯುತ್ತಿದ್ದಾರೆ. ಶುಂಠಿ ಬೆಳೆ ಪದ್ಧತಿ, ಔಷಧೋಪಚಾರ ಹಾಗೂ ಕಾರ್ಮಿಕರ ನಿರ್ವಹಣೆ ಸೇರಿದಂತೆ ಎಲ್ಲದರ ಬಗ್ಗೆ ರೈತರು ತಿಳಿದುಕೊಳ್ಳುತ್ತಿದ್ದಾರೆ. ಬೆಳೆಯಲ್ಲಿ ಪರಿಣಿತಿ ಪಡೆದು ಶುಂಠಿ ಬೆಳೆಯಲಾರಂಭಿಸಿದ್ದಾರೆ. ಮತ್ತು ಶುಂಠಿಯು ಮಣ್ಣಿನಲ್ಲಿರುವ ಸತ್ವವನ್ನು ಹೀರಿಕೊಂಡು ಬೆಳೆಯುವ ಬೆಳೆಯಾಗಿದೆ. ಈ ಬೆಳೆಗೆ ರೋಗಭಾದೆಯೂ ಹೆಚ್ಚು. ನಿರಂತರವಾಗಿ ಔಷಧೋಪಚಾರ ಮಾಡಬೇಕು. ಈ ಕ್ರಮದಿಂದಾಗಿ ಭೂಮಿಯ ಮಣ್ಣಿನ ಫಲವತ್ತತೆ ನಿಧಾನವಾಗಿ ಹಾಳಾಗುತ್ತದೆ ಎಂದು ತೋಟಗಾರಿಕೆ ಬೆಳೆಗಳ ತಜ್ಞರೊಬ್ಬರು ತಿಳಿಸಿದರು. ‘ಕಂಪನಿಯವರು ಇಂತಿಷ್ಟು ವರ್ಷ ಮಾತ್ರ ಒಂದೇ ಜಮೀನು ಬಾಡಿಗೆ ಪಡೆಯುತ್ತಾರೆ. ಮಣ್ಣಿನ ಸತ್ವ ಕಡಿಮೆಯಾದ ನಂತರ ಆ ಭೂಮಿ ತೊರೆಯುತ್ತಾರೆ. ಮತ್ತೊಂದು ಫಲವತ್ತತೆಯ ಭೂಮಿ ಹುಡುಕುತ್ತಾರೆ. ಹೆಚ್ಚಿನ ಹಣದ ಆಸೆಗಾಗಿ ರೈತರು ಜಮೀನು ನೀಡುತ್ತಿದ್ದಾರೆ. ಶುಂಠಿ ಬೆಳೆಯ ನಂತರ ಬೇರೆ ಬೆಳೆ ಬೆಳೆಯುವಾಗ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು. ‘ಶುಂಠಿ ಬೆಳೆಗೆ ಬೆಲೆ ಇರುವುದು ನಿಜ. ಆದರೆ ಅದನ್ನು ಬೆಳೆಯಲು ಸಾಕಷ್ಟು ಔಷಧಗಳು ಬೇಕಾಗುತ್ತವೆ. ರೈತರು ಯೋಚಿಸಿ ನಿರ್ಧಾರ ಕೈಗೊಳಬೇಕು. ಕ್ಷಣಿಕ ಲಾಭದ ಆಸೆಗೆ ಭೂಮಿ ಹಾಳು ಅಕೊಳ್ಳಬಾರದು’ ಎಂದು ಹೇಳಿದರು ಎನ್ನಲಾಗಿದೆ.

















