ಚಾಮರಾಜನಗರ: ತಾಲೂಕಿನ ಯರಗನಹಳ್ಳಿಯಲ್ಲಿ ತನಗೆ ಮದುವೆ ಮಾಡುವಂತೆ ಪಾಲಕರ ಜೊತೆ ನಿತ್ಯ ಕಿರಿಕ್ ತೆಗೆಯುತ್ತಿದ್ದ ಮದ್ಯ ವ್ಯಸನಿ ಮಗನೋರ್ವ ತಂದೆಯಿಂದಲೇ ಕೊಲೆಗೀಡಾದ ಘಟನೆ ಗುರುವಾರ ರಾತ್ರಿ ನಡೆದಿದ್ದು ಯರಗನಹಳ್ಳಿ ಗ್ರಾಮದ ಸಿದ್ದರಾಜು(32) ಕೊಲೆಯಾದ ಮಗ. ಸಿದ್ದೇಗೌಡ ಕೊಲೆ ಮಾಡಿದ ಆರೋಪಿ. ಸದ್ಯ, ತೆರಕಣಾಂಬಿ ಠಾಣೆ ಪೊಲೀಸರು ತಂದೆ ಸಿದ್ದರಾಜುವನ್ನು ಬಂಧಿಸಿದ್ದಾರೆ. ಸಾಮಾನ್ಯವಾಗಿ ಮಕ್ಕಳು ತನ್ನ ಅಪ್ಪ ಅಮ್ಮನ ಜತೆ ಸಂತೋಷದಿಂದ ಜೀವನ ನಡೆಸುತ್ತಾರೆ. ತಂದೆ ತಾಯಿಯ ಜೀವನಕ್ಕೆ ಆಸರೆಯಾಗುತ್ತಾರೆ. ಆದರೆ, ಸಿದ್ದರಾಜು ಮಾತ್ರ ಪ್ರತಿನಿತ್ಯ ಕುಡಿದು ಬಂದು ಅಪ್ಪ ಅಮ್ಮನ ಜತೆ ಗಲಾಟೆ ಮಾಡಿ ಇದೀಗ ಅಪ್ಪನಿಂದಲ್ಲಿ ಕೊಲೆಯಾಗಿ ದುರಂತ ಅಂತ್ಯ ಕಂಡಿದ್ದಾನೆ. ಈತ ಗಾರೆ ಕೆಲಸ ಮಾಡಿಕೊಂಡಿದ್ದು, ದಿನ ದುಡಿದ ದುಡ್ಡಿನಲ್ಲಿ ಕುಡಿದು ಅನೇಕ ವರ್ಷಗಳಿಂದ ತಂದೆ ತಾಯಿ ಹಾಗೂ ಮದುವೆಯಾಗಿದ್ದ ತಂಗಿಯ ಜೊತೆಗೂ ಬಿಟ್ಟು ಬಿಡದೆ ಜಗಳ, ಗಲಾಟೆಗಳನ್ನು ಮಾಡಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ತನಗೆ ಮದುವೆ ಮಾಡುವಂತೆ ಪೀಡಿಸುತ್ತಿದ್ದ. ಇತ್ತ ಮಗನ ಹಿಂಸೆ ತಾಳದೆ ತಂದೆ ತಾಯಿ ಮೊದಲು ಮದ್ಯ ಸೇವನೆ ನಿಲ್ಲಿಸು ನಂತರ ಮದುವೆಗೆ ಹುಡುಗಿ ನೋಡುವ ಕಾರ್ಯ ಮಾಡುತ್ತೇವೆ ಎಂದರೂ ಕೇಳದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು ಎನ್ನಲಾಗಿದೆ.

ಹಾಗೂ ಇದರಿಂದ ಪ್ರತಿನಿತ್ಯ ಬೇಸತ್ತಿದ್ದ ತಂದೆ ಸಿದ್ದೇಗೌಡ ಗುರುವಾರ ರಾತ್ರಿ ಕುಡಿದು ಬಂದ ಮಗನ ಜತೆ ಜಗಳವಾಡುವ ವೇಳೆ, ಸಿಮೆಂಟ್ ಇಟ್ಟಿಗೆಗಳಿಂದ ಹೊಡೆದಿದ್ದಾರೆ. ಅದರಿಂದ ತೀವ್ರ ರಕ್ತಸ್ರಾವವಾಗಿ ಸಿದ್ದರಾಜು ಸಾವನ್ನಪ್ಪಿದ್ದಾನೆ. ಇನ್ನು ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಚಾಮರಾಜನಗರ ಎಎಸ್ಪಿ ಶಶಿಧರ್ ಮಾಹಿತಿ ನೀಡಿ, ಸಿದ್ದರಾಜು ಸುಮಾರು 32 ವರ್ಷದ ಯುವಕ. ಮದುವೆಯಾಗಿಲ್ಲ, ಜೊತೆಗೆ ಅವನಿಗೆ ಕೆಲಸವೂ ಇರಲಿಲ್ಲ. ಸುಮಾರು 4 ವರ್ಷದಿಂದ ಕುಡಿದು ಮನೆಯವರಿಗೆ ತುಂಬಾ ಕಿರುಕುಳ ಕೊಡುತ್ತಿದ್ದ. ಇದನ್ನೂ ಗ್ರಾಮಸ್ಥರೂ ಹೇಳುತ್ತಾರೆ. ಅವನ ತಂಗಿಯನ್ನು ಅದೇ ಊರಿನ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ತಂಗಿಗೆ ಮದುವೆ ಮಾಡಿದ್ದೀರಿ, ತನಗೆ ಮದುವೆ ಮಾಡಿಲ್ಲ ಎನ್ನುವುದು ಅವನ ಡಿಮ್ಯಾಂಡ್. ಅವನಿಗೆ ಕೆಲಸ ಇಲ್ಲದಿರುವುದು ಜೊತೆಗೆ ಕುಡಿಯುತ್ತಿದ್ದ ಕಾರಣ ಅವನಿಗೆ ಹುಡುಗಿ ಸಿಗುತ್ತಿರಲಿಲ್ಲ. ಅವನ ತಂದೆ ಹೇಳಿದ ಪ್ರಕಾರ, ಕುಡಿಯೋದು ಬಿಟ್ಟುಬಿಡು, ಮದುವೆ ಮಾಡಿಸುತ್ತೇವೆ. ಕುಡಿಯೋದು ಮಾಡಿದ್ರೆ ಹೆಣ್ಣು ಸಿಗೋದು ಕಷ್ಟ ಇದೆ ಎಂದು ಹೇಳಿದ್ದರು. ಅದರ ಸಲುವಾಗಿ ಅವನು ಪದೇ ಪದೆ ಗಲಾಟೆ ಮಾಡುತ್ತಿದ್ದ, ಜೊತೆಗೆ ತಂದೆ ತಾಯಿ ಮೇಲೆ ಹಲ್ಲೆ ಮಾಡುತ್ತಿದ್ದ.

ಈ ವಿಚಾರ ಗ್ರಾಮದವರಿಗೆಲ್ಲ ಗೊತ್ತಿದೆ. ಸಿದ್ದರಾಜು ಕೆಲವೊಮ್ಮೆ ಗಾರೆ ಕೆಲಸಕ್ಕೆ ಹೋಗುತ್ತಾನೆ. ಬಂದ ಹಣವನ್ನು ಮನೆಗೆ ಕೊಡಲ್ಲ, ಕುಡಿಯುತ್ತಿದ್ದ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಗುರುವಾರ ರಾತ್ರಿ ಕೂಡ ಅದೇ ಆಗಿದೆ. ತಂದೆ ತಾಯಿ ಕೆಲಸ ಮಾಡಿ ಬಂದು ಮನೆ ಮುಂದೆ ಕುಳಿತಿದ್ದಾಗ ಗಲಾಟೆ ಶುರು ಮಾಡಿದ್ದಾನೆ. ಹಲ್ಲೆ ಮಾಡಲು ಮುಂದಾಗ ತಮಗೆ ಏನಾದರೂ ತೊಂದರೆ ಆಗಬಹುದು ಎಂದು ತಂದೆ ಅವನನ್ನು ತಳ್ಳಿದ್ದಾರೆ. ಜೊತೆಗೆ ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಅವನ ತಲೆಗೆ ತುಂಬಾ ಗಾಯವಾಗಿತ್ತು. ರಕ್ತಸ್ರಾವ ಆಗಿ ಸಿದ್ದರಾಜು ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ಮಾಡಿ, ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎನ್ನಲಾಗುತ್ತಿದೆ.
















