ಮನೆ ರಾಜ್ಯ ಕರ್ಕಶ ಹಾರ್ನ್‌, ಸೈಲೆನ್ಸರ್‌ ಮಾರ್ಪಡಿಸಿದರೆ ದಂಡ ಗ್ಯಾರಂಟಿ

ಕರ್ಕಶ ಹಾರ್ನ್‌, ಸೈಲೆನ್ಸರ್‌ ಮಾರ್ಪಡಿಸಿದರೆ ದಂಡ ಗ್ಯಾರಂಟಿ

0

ಬೆಂಗಳೂರು (Bengaluru): ವಾಹನಗಳಲ್ಲಿ ಮಾರ್ಪಡಿಸಿರುವ ಸೈಲೆನ್ಸರ್‌ ಬಳಕೆ, ವಾಹನಗಳಿಗೆ ಕರ್ಕಶ ಹಾರ್ನ್‌ ಹಾಕಿಸಿ ಶಬ್ಧ ಮಾಲಿನ್ಯ ಉಂಟು ಮಾಡುವ ವಾಹನ ಸವಾರರಿಗೆ ಹಾಗೂ ಮಾಲೀಕರಿಗೆ ಬಿಸಿ ಮುಟ್ಟಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಕೋರ್ಟ್‌ ನಿರ್ದೇಶನದಂತೆ ಮೋಟಾರು ವಾಹನ ಕಾಯಿದೆ ನಿಯಮಗಳನ್ನು ಪರಿಣಾಮಕಾರಿಯಗಿ ಜಾರಿಗೊಳಿಸಲು ಮುಂದಾಗಿರುವ ಅಧಿಕಾರಿಗಳು ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದುಬಾರಿ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತಿದ್ದಾರೆ.

ನಂಬರ್‌ ಪ್ಲೇಟ್‌ ಮೇಲೆ ನಾನಾ ರೀತಿಯ ಲಾಂಛನ, ಹುದ್ದೆಗಳ ಹೆಸರು ಬಳಕೆ, ಕರ್ಕಶ ಹಾರ್ನ್‌ ಹಾಕಿ ಶಬ್ಧ ಮಾಲಿನ್ಯ ಉಂಟು ಮಾಡುವ ವಾಹನ ಸವಾರರಿಗೆ ಹಾಗೂ ಮಾಲೀಕರಿಗೆ ಬಿಸಿ ಅಧಿಕಾರಿಗಳು ಬಿಸಿ ಮುಟ್ಟಿಸಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಶಬ್ಧ ಮಾಲಿನ್ಯ ಹಾಗೂ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘಿಸಿದ ಒಟ್ಟು 55,866 ವಾಹನ ಪರಿಶೀಲಿಸಿ, 638 ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಮೋಟಾರು ವಾಹನ ಕಾಯಿದೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ದಂಡ ಖಚಿತ.

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ನಾನಾ ವಾಹನಗಳ ಶಬ್ಧಮಾಲಿನ್ಯ ಹಾಗೂ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದಾರೆ. ಶಬ್ಧಮಾಲಿನ್ಯ ಉಂಟು ಮಾಡುವ ವಾಹನಕ್ಕೆ ಮೂರು ಸಾವಿರ ರೂ. ದಂಡ, ನಂಬರ್‌ ಪ್ಲೇಟ್‌ ಮೇಲೆ ಒಂದು ಅಕ್ಷರ ಅಥವಾ ಸಂಖ್ಯೆಗೆ 500 ರೂ. ದಂಡದಂತೆ, ಎಷ್ಟು ಅಕ್ಷರ, ವಿಭಿನ್ನ ವಿನ್ಯಾಸವಿರುತ್ತದೆಯೋ ಅಷ್ಟು ದಂಡ ವಿಧಿಸಲಾಗುತ್ತದೆ. ಆದರೆ, ಕಳೆದ ಮೂರು ವರ್ಷದಲ್ಲಿ ಸಾವಿರಾರು ವಾಹನ ಪರಿಶೀಲಿಸಿ, ದುಬಾರಿ ದಂಡ ವಿಧಿಸಿದರೂ ಕೂಡ ಕೆಲವು ಬೈಕ್‌ ಸವಾರರು ಮಾರ್ಪಡಿಸಿರುವ ಸೈಲೆನ್ಸರ್‌ ಬಳಸಿಕೊಂಡು ನಗರದಲ್ಲಿ ರಾತ್ರಿ ವೇಳೆ ಶಬ್ಧಮಾಲಿನ್ಯ ಉಂಟು ಮಾಡುತ್ತ ಸಂಚರಿಸುತ್ತಿದ್ದಾರೆ.

ಇನ್ನು, ನಂಬರ್‌ ಪ್ಲೇಟ್‌ ಮೇಲೆ ಲಾಂಛನ, ಚಿಹ್ನೆ, ಸಂಘ-ಸಂಸ್ಥೆಗಳ ಹೆಸರು ಒಳಗೊಂಡ ವಾಹನಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಹಾಗೂ ದಂಡ ವಿಧಿಸುವ ಅಗತ್ಯವಿದೆ ಎಂಬ ಮಾತು ಕೇಳಿ ಬಂದಿವೆ.

ವಾಟ್ಸ್ಆ್ಯಪ್‌ ದೂರು ಆಧರಿಸಿ ಸ್ವೀಕೃತವಾದ ಪ್ರಕರಣಗಳು, ನಗರಾಭಿವೃದ್ಧಿ, ಪಾಲಿಕೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವಾಹನಗಳಲ್ಲಿ ಅನಧಿಕೃತ ಲಾಂಛನ ಬಳಸಿದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಅಷ್ಟರಮಟ್ಟಿಗೆ ಸರಕಾರಿ ವಾಹನಗಳನ್ನು ಮೋಟಾರು ವಾಹನ ಕಾಯಿದೆ ನಿಯಮಗಳಂತೆ ಇಟ್ಟುಕೊಳ್ಳಲಾಗಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.

ಕರ್ಕಶ ಶಬ್ಧ ಹೊರಸೂಸುವ ವಾಹನಗಳು, ವಿಭಿನ್ನ ವಿನ್ಯಾಸದ ನಂಬರ್‌ ಪ್ಲೇಟ್‌, ನಂಬರ್‌ ಪ್ಲೇಟ್‌ ಮೇಲೆ ಯಾವುದಾದರೂ ಹೆಸರು, ಸರಕಾರಿ ಲಾಂಛನ, ಇತರ ಲೋಗೊ ಬಳಸಿದ್ದರೆ ಅಂತಹ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಇಂತಹ ವಾಹನಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮವಹಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂದಿನ ಲೇಖನಹೆಚ್.ಡಿ.ಕುಮಾರಸ್ವಾಮಿಗೆ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾಗಳ ಮೇಲೆ ದಾಳಿ: 8 ಮಹಿಳೆಯರ ರಕ್ಷಣೆ, 7 ಮಂದಿಯ ಬಂಧನ