ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಲೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು, ಅಪಾರ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಬೆಂಕಿ ವಾಚರ್‌ಗಳು ಬೆಂಕಿಯನ್ನು ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಎಷ್ಟು ಎಕರೆ ನಾಶವಾಗಿದೆ ಎಂಬುದು ತಿಳಿದು ಬಂದಿಲ್ಲ.
ಕಳೆದ ಹಲವು ದಿನಗಳಿಂದಲೂ ಈ ಭಾಗದಲ್ಲಿ ನಿರಂತರವಾಗಿ ಅರಣ್ಯಕ್ಕೆ ಬೆಂಕಿ ಬಿದ್ದು ಅರಣ್ಯ ನಾಶವಾಗುತ್ತಿದೆ. ಬೈಲೂರು, ಕೊಳ್ಳೇಗಾಲ ವಲಯ ವ್ಯಾಪ್ತಿಯಲ್ಲಿ ಮೂರು ನಾಲ್ಕು ಬಾರಿ ಬಿದ್ದ ಬೆಂಕಿಯಿಂದಾಗಿ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯಕ್ಕೆ ಬೆಂಕಿ ಬೀಳದಂತೆ ಅರಣ್ಯದಂಚಿನ ಹಾಗೂ ಹಾಡಿಗಳಲ್ಲಿ ಅರಣ್ಯ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡಿದರು ಕೂಡ ಅರಣ್ಯಕ್ಕೆ ಬೆಂಕಿ ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.















