ಮನೆ ರಾಜ್ಯ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ..!

ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ..!

0

ಬೆಂಗಳೂರು : ಮಾಜಿ ಸಂಸದ ಅನಂತ್‌ಕುಮಾರ್‌ ಹೆಗ್ಡೆ ಪುತ್ರ ಅಶುತೋಷ್‌ ವಿರುದ್ಧ ದಾಖಲಾಗಿರುವ ಗಲಾಟೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ. ಅಶುತೋಷ್ ಅವರು ಘಟನೆಯ ಸಮಯದಲ್ಲಿ ಕಾರಿನಿಂದ ಕೆಳಕ್ಕೆ ಇಳಿದಿರಲಿಲ್ಲ ಮತ್ತು ಅವರ ವಿರುದ್ಧ ನೇರ ಆರೋಪಗಳಿಲ್ಲ ಎಂದು ಅಶುತೋಶ್‌ ಪರ ವಕೀಲರು ಇಂದು ಕೋರ್ಟ್‌ಗೆ ತಿಳಿಸಿದರು. ಅಶುತೋಷ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಹೈಕೋರ್ಟ್ ಅವರ ವಿರುದ್ಧದ ತನಿಖೆಗೆ ತಡೆ ನೀಡಿದೆ.

ಏನಿದು ಪ್ರಕರಣ? – ಅಶುತೋಷ್ ಅವರ ತಂದೆ ಅನಂತ್‌ಕುಮಾರ್ ಹೆಗಡೆ ಅವರ ಮಹೀಂದ್ರಾ ಕಾರನ್ನು ಇನ್ನೋವಾ ಕ್ರಿಸ್ಟಾ ಓವರ್‌ಟೇಕ್ ಮಾಡಲು ಪ್ರಯತ್ನಿಸಿತ್ತು. ಮಾಜಿ ಸಂಸದರ ಕಾರಿನ ಚಾಲಕ ಹಾದಿ ಬಿಡುವಂತೆ ಪದೇ ಪದೇ ಹಾರ್ನ್ ಮಾಡಿದರೂ ಇನ್ನೋವಾ ಕಾರಿನ ಚಾಲಕ ಗಮನಿಸದೇ ಚಾಲನೆ ಮುಂದುವರಿಸಿದ್ದರು. ಇದರಿಂದ ಸಿಟ್ಟಾದ ಮಾಜಿ ಸಂಸದರ ಸಿಬ್ಬಂದಿ ಇನ್ನೋವಾ ಕಾರನ್ನು ತಡೆದು ನಿಲ್ಲಿಸಿದ್ದರು. ನಂತರ ಗನ್‌ಮ್ಯಾನ್ ಮತ್ತು ಚಾಲಕ ಕೆಳಗಿಳಿದು ಬಂದು ಸೈಫ್ ಖಾನ್ ಅವರನ್ನು ಹೊರಕ್ಕೆ ಎಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಅನಂತ್ ಕುಮಾರ್​ ಹೆಗಡೆ, ಅವರ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೋವಾ ಕಾರಿನಲ್ಲಿದ್ದ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಅವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಅಶುತೋಷ್ ಪ್ರಸ್ತುತ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರಿಂದ ಅವರಿಗೆ ಪಾಸ್‌ಪೋರ್ಟ್ ನವೀಕರಿಸಲು ಅಥವಾ ಪಡೆಯಲು ತೊಂದರೆಯಾಗುತ್ತಿದೆ. ಹೀಗಾಗಿ ಈ ಪ್ರಕರಣದಿಂದ ಅವರನ್ನು ಕೈಬಿಡುವಂತೆ ಅಶುತೋಷ್ ಪರ ವಕೀಲರು ಮನವಿ ಮಾಡಿದ್ದರು.