ಚೆನ್ನೈ: ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪುದುಕೊಟ್ಟಾಯಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಐವರ ಮೃತದೇಹಗಳು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಂತಿರುವುದು ಪತ್ತೆಯಾಗಿತ್ತು. ಸಂಜೆಯಿಂದ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಮೃತರನ್ನು 50 ವರ್ಷದ ಉದ್ಯಮಿ ಮಣಿಕಂಠನ್, ಅವರ ಪತ್ನಿ ನಿತ್ಯಾ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಅವರ ಸೇಲಂ ನಿವಾಸಿಗಳು ಎಂದು ತಿಳಿದು ಬಂದಿದೆ. ತಮ್ಮ ಮನೆಯಿಂದ ಸುಮಾರು 200 ಕಿಮೀ ದೂರದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಮಾಹಿತಿ ನೀಡಿದ್ದಾರೆ.
ಪೊಲೀಸರು ಕಾರಿನಿಂದ ಪತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ. ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದು ಏನು ಎಂಬುದನ್ನು ಅವರು ಇನ್ನೂ ಖಚಿತಪಡಿಸಿಲ್ಲ. ಕುಟುಂಬವು ಸಾಲಗಾರರಿಂದ ಒತ್ತಡಕ್ಕೆ ಒಳಗಾಗಿದೆಯೋ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಲೋಹದ ವ್ಯಾಪಾರದಲ್ಲಿದ್ದ ಮಣಿಕಂದನ್ ಸಾಲದಲ್ಲಿದ್ದರು ಎಂದು ವರದಿಗಳು ಸೂಚಿಸುತ್ತವೆ.