ಭಿದರೆಲೆ ಆಕಾರದ ಹಸಿರೆಲೆ, ನೆಲದಡಿ ಹರಡುವ ಕೈ ಬೆರಳಿನಾ ಕಾರದ ಗೆಡ್ಡೆ. ಗೆಡ್ಡೆಯ ಗಿಣ್ಣುಗಳಿಂದಲೇ ಹೊಸ ಸಸ್ಯದ ಹುಟ್ಟು, ಹಾಗಾಗಿ ಇದು ಹೂ, ಕಾಯಿ ಬಿಡುವುದು ವಿರಳ. ನೀಲಿ ಬಣ್ಣದ ಹೂ ಬಿಡುವುದು ಅಪರೂಪ. ಉಸುಕು ಮಿಶ್ರಿತ ಗೋಡು ಮಣ್ಣು ಶುಂಠಿ ಕೃಷಿಗೆ ಹೇಳಿ ಮಾಡಿಸಿದ್ದು, ಗರಿಷ್ಠ ಮಳೆ ಬೀಳುವ ಪ್ರದೇಶದಲ್ಲಿ ಶುಂಠಿ ಬೆಳೆ ಸಮೃದ್ಧ.
ಹಸಿಶುಂಠಿ ಮತ್ತು ಒಣಶುಂಠಿಗೆ ಕೊಂಚ ಗುಣಧರ್ಮ ಬದಲಾಗುತ್ತದೆ. ಸಂಹಿತೆಗಳಲ್ಲಿ ಹಸಿಶುಂಠಿಗೆ ಆರ್ದ್ರಕ ಎಂದು ಹೆಸರಿದೆ. ಭಾರತೀಯ ಸಾಂಬಾರ ಪದರ್ಥಾಗಳಲ್ಲಿ ಶುಂಠಿಗೆ ವಿಶೇಷ ಮಹತ್ವದ ಸ್ಥಾನವಿದೆ. ಹಸಿ ಶುಂಠಿಗೆ ಕನ್ನಡದಲ್ಲಿ ʼಅಲ್ಲʼ ಎಂದು ಹೆಸರು. ವಿಶ್ವಭೇಷಜ, ನಾಗರ, ನಗರಜ, ಊಷಣ, ಕಟುಭದ್ರ, ಮಹೌಷದ, ಶೃಂಗವೇರ, ಕಟುಭದ ಎಂಬ ಸಂಸ್ಕೃತ ಹೆಸರುಗಳಡಿ ಆಯುರ್ವೇದದ ಸಾಹಿತ್ಯದಲ್ಲಿ ಶುಂಠಿ, ಹಸಿಶುಂಠಿ ವರ್ಣಿತವಾಗಿದೆ.
ನಾರುರಹಿತ ಶುಂಠಿಗೆ ಹೆಚ್ಚು ಬೇಡಿಕೆಯಿದೆ. ಹಸಿ ಶುಂಠಿಯನ್ನು ತೇವಾಂಶ ತೆಗೆಯುವ ಸಲುವಾಗಿ ನೀರಲ್ಲಿ, ಹಾಲಿನಲ್ಲಿ ಕುದಿಸಿ ಸುಣ್ಣದ ಸಂಗಡ ಒಣಗಿಸುತ್ತಾರೆ. ಗಂಧಕದ ಹೊಗೆ ಹಾಕಿ ಕೂಡ ಶುಂಠಿಯ ತಾಳಿಕೆ ಬಾಳಿಕೆ ವರ್ಧಿತ್ತಾರೆ. ಒಣಗಿದ್ದು ಚಿರಕಾಲ ಕೆಡದು. ಕಂದು, ಬಿಳಿ ಎಂಬ ಎರಡು ಪ್ರಕಾರದ ಶುಂಠಿ ಮಾರುಕಟ್ಟೆಯಲ್ಲಿ ಲಭ್ಯ. ಒಣಗಿದ ಶುಂಠಿಯಲ್ಲಿ ಸಹ ಶೇಕಡಾ ಮೂರಾಂಶ ಆವಿಯಾಗುವ ಸ್ವಭಾವದ ತೈಲವಿದೆ. ಈ ತೈಲವು ಜಿಬೆರೋಲ್, ಶೆಗೋಲ್ ಎಂಬ ಕಟುದ್ರವ್ಯ ಹೊಂದಿದೆ. ರಾಳ, ಪಿಷ್ಟದಂಶವೂ ಇವೆ.
ಅಲ್ಲಾವನ್ನು ಒಣಗಿಸಿ ಶುಂಠಿ ತಯಾರಿಸುತ್ತಾರೆ. ಇದು ಖಾದ್ಯ ಪದಾರ್ಥಗಳನ್ನು ಸ್ವಾಧಿಷ್ಟವಾಗಿ ಮಾಡಲು ಬಳಸುತ್ತಾರೆ. ಇದು ಪಚನ ಕ್ರಿಯೆ ಹೆಚ್ಚಿಸುತ್ತದೆ. ವಾಯುದೋಷ ದೂರ ಮಾಡುತ್ತದೆ, ಅಡುಗೆಯ ರುಚಿ ಹೆಚ್ಚಿಸುತ್ತದೆ. ಉದರ ನೋವು ಕಡಿಮೆ ಮಾಡುತ್ತದೆ. ಸ್ಮರಣ ಶಕ್ತಿ ಹೆಚ್ಚಿಸುತ್ತದೆ. ಕಾಮಾಲೆ ರೋಗ ಗುಣಮಾಡುತ್ತದೆ. ಮಜ್ಜಿಗೆಯಲ್ಲಿ ಶುಂಠಿ, ಉಪ್ಪು ಮತ್ತು ಕರಿಮೆಣಸಿನ ಪುಡಿ ಬೆರೆಸಿ ಸೇವಿಸಿದರೆ ಇದರ ನೋವು, ಭೇದಿ, ಆಮಶಂಕೆ ಶಾಂತಗೊಳಿಸುತ್ತದೆ.
ಔಷಧೀಯ ಗುಣಗಳು :-
ಶೀತ :- ಅಲ್ಲಾವನ್ನು ಕುಟ್ಟಿ ಸ್ವಲ್ಪ ಉಪ್ಪು ಬೆರೆಸಿ ತಿನ್ನಲು ಶೀತ-ನೆಗಡಿ ಕೂಡಲೆ ಗುಣವಾಗುತ್ತದೆ. ಇದನ್ನು ಸ್ವಲ್ಪ ಬಿಸಿಮಾಡಿ ಊಟದೊಂದಿಗೆ ಸೇವಿಸಿದರೆ, ಶೀತಕಾಲದಲ್ಲಿಯೂ ಶೀತ, ನೆಗಡಿ, ಕೆಮ್ಮುಗಳ ಪ್ರಭಾವವಾಗುವುದಿಲ್ಲ.
ಅಜೀರ್ಣ :- ಹೊಟ್ಟೆ ನೋವಿಗೆ-ಅಜೀರ್ಣ, ಭೇದಿ, ಹೊಟ್ಟೆ ನೋವಿನ ಪರಿಹಾರಕ್ಕೆ ಶುಂಠಿ ರಸ ಅಥವಾ ಹರಳೆಲೆಯಲ್ಲಿ ಚೆಂಡು ಕಟ್ಟಿ ಬೆಂಕಿಯೊಳಗೆ ಸುಟ್ಟು, ತೆಗೆದ ಶುಂಠಿ ಪುಟಪಾಕ ರಸ ಸೇವನೆಯಿಂದ ಅಧಿಕ ಲಾಭವಿದೆ.
ನೋವಿಗೆ :- ಹಸಿಶುಂಠಿ ರಸವನ್ನು ತುಪ್ಪದೊಂದಿಗೆ ಬೆರೆಸಿ ಕುಡಿದರೆ ಸೊಂಟನೋವು, ಬೆನ್ನುನೋವು ಇತ್ಯಾದಿ ಗುಣವಾಗುತ್ತದೆ. ತಲೆನೋವಿಗೆ ಶುಂಠಿ ತೇಯ್ದು ಹಣೆಗೆ ಹಚ್ಚಬೇಕು.
ಹಲ್ಲು ನೋವಿಗೆ :- ಹಲ್ಲು ಒಸಡಿನಲ್ಲಿ ನೋವಿದ್ದರೆ, ಒಂದು ತುಣುಕು ಹಸಿಶುಂಠಿ ಜಗಿದು ಒತ್ತಿ ಹಿಡಿದರೆ ನೋವು ಕಡಿಮೆಯಾಗುತ್ತದೆ…..
ಶ್ವಾಸ ರೋಗ :- ದಮ್ಮು, ಕಫ, ಕ್ಷಯಗಳಲ್ಲಿ ಜೇನಿಯೊಂದಿಗೆ ಬೆರೆಸಿ ನೆಕ್ಕಿಸಿದರೆ ಶ್ವಾಸ ರೋಗದಲ್ಲಿ ಗುಣಮುಖವಾಗುತ್ತದೆ…..
ವಾಂತಿಗೆ :- ಈರುಳ್ಳಿ ಮತ್ತು ಶುಂಠಿ ರಸ ತಲಾ ಒಂದು ಚಮಚ ಕುಡಿಸಿ ಸೇವಿಸಿದರೆ ವಾಂತಿ ಮತ್ತು ವಾಕರಿಕೆಗಳು ಪರಿಹಾರವಾಗುತ್ತದೆ.
ಕಿವಿನೋವಿಗೆ :- ಕಿವಿ ನೋವಿನಲ್ಲಿ ಬಿಸಿ ಮಾಡಿದ ಶುಂಠಿ ರಸ ಕಿವಿಗೆ ತೊಟ್ಟಿಕ್ಕಿಸಿದರೆ ಕಿವಿ ನೋವು ಪರಿಹಾರವಾಗುತ್ತದೆ.
ಹಾನಿಕಾರಕ ಅಂಶಗಳು :-
ಹಸಿ ಶುಂಠಿಯನ್ನು ಬಹಳಷ್ಟು ಉಪಯೋಗಿಸಬಾರದು, ಬರಿದಾಗಿ ಸೇವಿಸಬಾರದು, ಇದರಿಂದ ಪಚನಕ್ರಿಯೆ ಕೆಡುವುದು, ಪಿತ್ತ ಅಧಿಕಗೊಂಡು ಎದೆ ಉರಿಯುವುದು, ಮೂತ್ರ ಕೆಂಪು ಬಣ್ಣಕ್ಕೆ ತಿರುಗಿ ಉರಿಯುವುದು. ರಕ್ತದ ಬಿಸಿ ಹೆಚ್ಚುವುದು. ಕುಷ್ಟ, ಪಾಂಡು, ಕಾಮಾಲೆ, ಮೂತ್ರದ ಉರಿ, ರಕ್ತಪಿತ್ತ, ಜ್ವರದ ತೀವ್ರತೆ ಇದ್ದಾಗೆ ಇದನ್ನು ಸೇವಿಸಬಾರದು. ಹಸಿ ಶುಂಠಿಯನ್ನು ಮಿತ ಪ್ರಮಾಣದಲ್ಲಿಉಪಯೋಗಿಸಬೇಕು.