ನಂಜನಗೂಡು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ರಾಷ್ಟ್ರ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕವನ್ನು ಹರಿದು ಮಣ್ಣು ಬಳಿದು ಅಪಮಾನ ಗೊಳಿಸಿರುವ ಘಟನೆ ನಡೆದಿದೆ. ತಡರಾತ್ರಿ ಕಿಡಿಗೇಡಿಗಳಿಂದ ನಡೆದ ಕೃತ್ಯವನ್ನು ಖಂಡಿಸಿ ಹಲ್ಲರೆ ಗ್ರಾಮದ ದಲಿತ ಬಂಧುಗಳು ಮತ್ತು ಸಂಘಟಕರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಪರಿಸ್ಥಿತಿ ಅರಿತ ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು ಡಿವೈಎಸ್ಪಿ ರಘು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಲಿಂಗು ಗ್ರಾಮಕ್ಕೆ ಭೇಟಿ ನೀಡಿ ಸವಿವರವಾದ ವರದಿಯನ್ನು ಪಡೆದು ಪ್ರತಿಭಟನೆ ನಿರತರನ್ನು ಮನವೊಲಿಸಲು ಮುಂದಾಗಿದ್ದಾರೆ. ಪ್ರತಿಭಟನೆಕಾರರು ಕಿಡಿಗೇಡಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ರಾಷ್ಟ್ರ ನಾಯಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವ ತನಕ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ನಂತರ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ಡಿವೈಎಸ್ಪಿ ರಘು ಪ್ರತಿಭಟನೆ ನಿರತ ಗ್ರಾಮಸ್ಥರಿಗೆ ಸಮಾಧಾನಪಡಿಸಿ ಒಂದು ವಾರದ ಒಳಗಾಗಿ ಕೃತ್ಯವ್ಯಸಗಿರುವ ಕಿಡಿಗೇಡಿಗಳನ್ನು ಹಾಗೂ ಪಿತೂರಿ ಮಾಡಿರುವವರನ್ನು ಕೂಡ ಬಂಧಿಸಿ ಮುಂದಿನ ದಿನಗಳಲ್ಲಿ ಇಂತಹ ಕಹಿ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮನವಿ ಮಾಡಿದರು.
ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಮತ್ತು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಮಾತನಾಡಿ ನಂಜನಗೂಡು ಒಂದು ಮೀಸಲು ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಹಿಂದುಳಿದ ಜನರೇ ವಾಸಿಸುವ ಅತಿ ದೊಡ್ಡ ತಾಲೂಕ್ ಆಗಿದೆ ಇಂತಹ ಮೀಸಲು ಕ್ಷೇತ್ರದಲ್ಲಿಯೇ ರಾಷ್ಟ್ರ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕಕ್ಕೆ ಅಪಮಾನ ಮಾಡಿದರೆ ಇನ್ನು ಸಾಮಾನ್ಯ ಕ್ಷೇತ್ರಗಳ ಗತಿ ಏನು? ಅದು ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆ ಇಂತಹ ಬಿಗಿ ಭದ್ರತೆ ಇರುವ ಹಾಗೂ ಕಟ್ಟುನಿಟ್ಟಿನ ಆಡಳಿತ ಕಾರ್ಯವೈಖರಿ ಇರುವ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆದರೆ ಅದಕ್ಕೆ ಪ್ರಮುಖ ಕಾರಣ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಹೊಣೆಗಾರರು ಯಾಕೆಂದರೆ ಹಲ್ಲರೆ ಗ್ರಾಮದಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಬಾಬಾ ಸಾಹೇಬರ ನಾಮಫಲಕ ಅಳವಡಿಸುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ನಡೆದ ಸಂಘರ್ಷ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಇಂತಹ ಸೂಕ್ಷ್ಮ ಸ್ಥಳದಲ್ಲಿ ಪ್ರಮುಖವಾಗಿ ಪೊಲೀಸರ ವೈಫಲ್ಯ ತಾಲೂಕು ಆಡಳಿತದ ನಿರ್ಲಕ್ಷತನ ಎದ್ದು ಕಾಣುತ್ತಿದೆ. ಒಂದು ವಾರದ ಒಳಗಾಗಿ ಕಿಡಿಗೇಡಿಗಳನ್ನು ಬಂಧಿಸಬೇಕು ರಾಜ್ಯದಿಂದ ಗಡಿಪಾರು ಮಾಡಬೇಕು ಇಲ್ಲದಿದ್ದಲ್ಲಿ ಉಗ್ರವಾದ ಪ್ರತಿಭಟನೆಯನ್ನು ನಡೆಸಲು ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಹಿರಿಯ ಮುಖಂಡ ಮಹದೇವ್ ಮಾತನಾಡಿ ಕಳೆದ ಒಂದು ವರ್ಷಗಳ ಹಿಂದೆ ಅನ್ಯ ಕೋಮಿನ ವ್ಯಕ್ತಿಗಳು ದಲಿತರ ಮನೆಗಳಿಗೆ ನುಗ್ಗಿ ದಾಂದಲೆ ಮಾಡಿ ಸಾಕಷ್ಟು ಹಾನಿ ಉಂಟು ಮಾಡಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಿಲ್ಲ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಲಿಲ್ಲ ಆ ಒಂದು ನಿರ್ಲಕ್ಷತನದಿಂದ ಇಂದು ಅಂಬೇಡ್ಕರ್ ನಾಮಫಲಕವನ್ನ ದ್ವಂಸಗೊಳಿಸಿ ಕಿಡಿಗೇಡಿ ಕೃತ್ಯಕ್ಕೆ ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ನಿರ್ಲಕ್ಷತನ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಉನ್ನತ ಮಟ್ಟದ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು, ಹಲ್ಲರೆ ಗ್ರಾಮದ ದಲಿತರಿಗೆ ರಕ್ಷಣೆ ನೀಡಬೇಕು, ಕೃತ್ಯಕ್ಕೆ ಕಾರಣವಾಗಿರುವ ವ್ಯಕ್ತಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಮಾತನಾಡಿದರು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಘು ರವರ ನೇತೃತ್ವದಲ್ಲಿ ಪಿಎಸ್‌ಐ ೬, ಇನ್ಸ್ಪೆಕ್ಟರ್ ೫, ಕಾನ್ಸ್ಟೇಬಲ್ ೬೦ ಪೊಲೀಸರನ್ನು ನಿಯೋಜನೆ ಮಾಡಿ ಗ್ರಾಮದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರು ಮಾತನಾಡಿ, ಗ್ರಾಮದಲ್ಲಿ ಆಗಿರುವ ಘಟನೆಯನ್ನು ನಾವು ಕೂಡ ಖಂಡಿಸುತ್ತೇವೆ. ಈ ಸಂಬಂಧ ಪ್ರಕರಣ ದಾಖಲಾಗುತ್ತದೆ. ಕಳೆದ ಬಾರಿಯೂ ಇದೇ ರೀತಿಯ ಘಟನೆ ನಡೆದಿರುವುದರಿಂದ ತನಿಖೆಯನ್ನು ಮತ್ತಷ್ಟು ಚುರುಕು ಗೊಳಿಸಲಾಗುವುದು. ಘಟನೆ ಸಂಬಂಧ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಾಮ ಫಲಕವನ್ನು ಹೊಸದಾಗಿ ಬರೆಸಲು ಸೂಚಿಸಲಾಗಿದೆ. ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದು, ಶೀಘ್ರದಲ್ಲಿ ಕಿಡಿಗೇಡಿಗಳನ್ನು ಬಂಧಿಸಲು ಕ್ರಮ ವಹಿಸುತ್ತೇವೆ ಎಂದರು.
ಡಿವೈಎಸ್ಪಿ ರಘು ರವರು ಮಾತನಾಡಿ, ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ರಾಷ್ಟ್ರೀಯ ನಾಯಕರಗಳಿಗೆ ಅವಮಾನ ಮಾಡುವುದನ್ನು ಯಾರು ಒಪ್ಪುವುದಿಲ್ಲ. ಶೀಘ್ರವೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಗ್ರಾಪಂ ಸದಸ್ಯೆ ಲಕ್ಷ್ಮಿ, ಮಾಜಿ ಗ್ರಾಪಂ ಸದಸ್ಯೆ ಜಯಮ್ಮ, ಮುಖಂಡ ಹಲ್ಲರೆ ಮಹದೇವ್, ಸುರೇಶ್, ಕರ್ನಾಟಕ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ, ನಗರ ಅಧ್ಯಕ್ಷ ಚೆಲುವರಾಜು, ಯುವ ಮುಖಂಡರಾದ ಎಂ.ಡಿ.ಬಾಲರಾಜು, ಮುಳ್ಳೂರು ಅಕ್ಷಯ್, ಪುಟ್ಟಬುದ್ಧಿ, ಮಹೇಶ್, ದೇವಪ್ರಕಾಶ್, ಮಲಿಯಯ್ಯ, ಮಹದೇವಸ್ವಾಮಿ, ನಂಜಯ್ಯ, ಪುಟ್ಟದೇವಯ್ಯ, ನಾಗುರ್, ಹೆಚ್.ಕೆ.ಮಹದೇವಯ್ಯ, ರಮೇಶ್, ಭಾಗ್ಯಮ್ಮ, ಪುಟ್ಟನಂಜಮ್ಮ, ಸಾಕಮ್ಮ, ಸುಧಾ ಸೇರಿದಂತೆ ಹಲವರು ಭಾಗವಹಿಸಿದ್ದರು.













