ಬೆಂಗಳೂರು : ಸಾರಿಗೆ ನೌಕರರ 26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 1271 ಕೋಟಿ ರೂ. ಹಿಂಬಾಕಿ ಪಾವತಿಗೆ ಅನುಮೋದನೆ ಸಿಕ್ಕಿದೆ. ಅದರಲ್ಲಿ 450 ಕೋಟಿ ರೂ. ಬಿಡುಗಡೆ ಮಾಡಿದೆ.
2021ರ ಜ.1 ರಿಂದ 2023ರ ಫೆ.28 ರವರೆಗೆ ಹಿಂಬಾಕಿ ಪಾವತಿಸಿದೆ. ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹಾನುಭೂತಿಯಿಂದ ಅನುದಾನ ಬಿಡುಗಡೆಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಒಟ್ಟು ನಾಲ್ಕು ಸಾರಿಗೆ ನಿಗಮದ ನೌಕರರಿಗೂ ಹಿಂಬಾಕಿ ಪಾವತಿಯಾಗಲಿದೆ. ಏಕಕಾಲಕ್ಕೆ ನೌಕರರಿಗೆ ಹಣ ಪಾವತಿ ಗೆ ಸೂಚನೆ ನೀಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದನೆ ಮಾಡಿದೆ. 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿಗೆ ನೀಡಿದೆ. 26 ತಿಂಗಳ ಹಿಂಬಾಕಿಗೆ ಬಜೆಟ್ ನಂತರ 1,271 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು.
38 ತಿಂಗಳ ಹಿಂಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಕಾರ್ಮಿಕರ ಕಿರುಕುಳ ನಿಲ್ಲಬೇಕು ಹಾಗೂ 1-1-2024 ರಿಂದ ವೇತನ ಜಾರಿಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು.















