ಬೆಂಗಳೂರು : ಬಿಸಿಲಿನಿಂದ ಕಾದು ಕೆಂಡವಾಗಿದ್ದ ಬೆಂಗಳೂರಿನ ಹಲವೆಡೆ ಬುಧವಾರ (ಇಂದು) ಸಂಜೆ ಆಲಿಕಲ್ಲು, ಭಾರೀ ಗಾಳಿ ಸಹಿತ ಮಳೆಯಾಗಿದೆ. ಇದರಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ಬೆಂಗಳೂರಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಹವಾಮಾನ ಇಲಾಖೆಯು ಏಪ್ರಿಲ್ 29 ಮತ್ತು 30 ರಂದು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಸೂಚನೆ ನೀಡಿತ್ತು. ಜೊತೆ ಆರೆಂಟ್ ಅಲರ್ಟ್ ಸಹ ಮಾಡಿತ್ತು. ಅಂತೆಯೇ ಇದೀಗ ಬೆಂಗಳೂರು ಸುತ್ತಮುತ್ತ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಮಂಗಳವಾರ ಸಂಜೆ ಸಹ ನಗರದ ಹೃದಯ ಭಾಗದಲ್ಲಿ ಭಾರೀ ಮಳೆಯಾಗಿದೆ. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಶಾಂತಿನಗರ, ಲಾಲ್ಬಾಗ್, ವಿಲ್ಸನ್ ಗಾರ್ಡನ್, ಕಾರ್ಪೋರೇಶನ್, ಜಯನಗರ, ಚಿನ್ನಸ್ವಾಮಿ, ಮಹಾತ್ಮ ಗಾಂಧಿ ರಸ್ತೆ, ಹಲಸೂರು, ವಿಧಾನಸೌಧ, ಶಿವಾಜಿನಗರ, ರೇಸ್ ಕೋರ್ಸ್ ರಸ್ತೆ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಜಯನಗರ, ಜೆಪಿ ನಗರ, ಬಸವನಗುಡಿ ಮೊದಲಾದೆಡೆ ಗಾಳಿಯಿಂದ ಕೂಡಿದ ಆಲಿಕಲ್ಲು ಮಳೆ ಸುರಿದಿದೆ. ಟ್ರಿನಿಟಿ ಸರ್ಕಲ್ ಬಳಿ ಆಲಿಕಲ್ಲು ಮಳೆಯಾಗಿದೆ.
ಅಲ್ಲದೇ ಯಲಹಂಕ, ವಿದ್ಯಾರಣ್ಯಪುರ, ಜಾಲಹಳ್ಳಿ ಸೇರಿದಂತೆ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ನಗರದ ಕೆಲೆವೆಡೆ ವಾಹನ ಸಂಚಾರದಲ್ಲಿ ವ್ಯತ್ಯಯ ಆಯಿತು. ಹೀಗಾಗಿ ಸಂಜೆ ವೇಳೆ ಮನೆ ಕಡೆ ತೆರಳುತ್ತಿದ್ದವರು ಟ್ರಾಫಿಕ್ ನಲ್ಲಿ ಸಿಲುಕಿ ಸಂಕಷ್ಟ ಎದುರಿಸಿದರು.















