ಹಾಸನ: ಅತಿ ವೇಗವಾಗಿ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ – ಮಗ ಸಾವನ್ನಪ್ಪಿ, ತಾಯಿ ಮತ್ತು ಇನ್ನೊಬ್ಬ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹಾಸನದಲ್ಲಿ ಭಾನುವಾರ ಸಂಜೆ ನಡೆದಿದೆ ಎಂಬುದು ತಿಳಿದುಬಂದಿದೆ.
ಜಯಣ್ಣ (38, ತಂದೆ), ಮಿಥುನ್ (8, ಮಗ) ಮೃತಪಟ್ಟರೆ, ರಜಿನಿ (29, ತಾಯಿ), ಮಿಲನ್ (4, ಕಿರಿಯ ಮಗ) ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು. ‘ಹಾಸನದಲ್ಲಿ 10 ವರ್ಷಕ್ಕೊಮ್ಮೆ ನಡೆಯುವ ಶ್ರೀ ದೇವಿರಮ್ಮ ಜಾತ್ರಾ ಮಹೋತ್ಸವ ಮತ್ತು ಬಂಡಿ ಹಬ್ಬ ಉತ್ಸವದ ಹಿನ್ನೆಲೆಯಲ್ಲಿ ಜಯಣ್ಣ ಕುಟುಂಬ ಹಾಸನಕ್ಕೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್ ಕುಟುಂಬ ಸಮೇತ ದ್ವಿಚಕ್ರ ವಾಹನದಲ್ಲಿ ಗೊರೂರಿಗೆ ಹಿಂದಿರುಗುವಾಗ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಇರುವ ದೇವೇಗೌಡರ ವೃತ್ತದ ಸಮೀಪ ಅತಿ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕುಟುಂಬದ ನಾಲ್ಕು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮಿಥುನ್ ಸಾವಿಗೀಡಾದರೆ, ತಂದೆ ಜಯಣ್ಣ ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ’ ಎಂದು ಜಯಣ್ಣ ಸಂಬಂಧಿಕರಾದ ರಾಮು ತಿಳಿಸಿದ್ದಾರೆ. ‘ಜಯಣ್ಣ ಒಬ್ಬ ಕ್ರೀಡಾಪಟು. ಸಾಮಾನ್ಯವಾಗಿ ಮತ್ತೊಬ್ಬರಿಗೆ ಬುದ್ಧಿವಾದ ಹೇಳುವವನು. ವಾಹನವನ್ನು ಕೂಡ ಅತಿ ವೇಗವಾಗಿ ಓಡಿಸುವುದಿಲ್ಲ. ನಿನ್ನೆ ಹಬ್ಬಕ್ಕೆಂದು ಬೆಳಗ್ಗೆ ಗೊರೂರಿನ ಅಂಬೇಡ್ಕರ್ ನಗರದಿಂದ ಹಾಸನಕ್ಕೆ ಬಂದಿದ್ದರು. ಆದರೆ ವಿಧಿ ಕುಟುಂಬಕ್ಕೆ ಕಂಟಕ ಪ್ರಾಯವಾಗಿದೆ’ ಎಂದು ಮೃತ ಜಯಣ್ಣ ಕುಟುಂಬದ ಸಂಬಂಧಿ ಮಂಜುನಾಥ್ ಹೇಳಿದರು. ‘ಅಪಘಾತವಾದ ಬಳಿಕ, ಸ್ಥಳೀಯರು 108ಗೆ ಕರೆ ಮಾಡಿದ್ದರು. ಕುಟುಂಬದ ನಾಲ್ಕು ಸದಸ್ಯರನ್ನು ಎರಡು ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ಬದಲು ದಂಪತಿಯನ್ನು ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸರ್ಕಾರಿ ವಾಹನಗಳು ಸರ್ಕಾರಿ ಆಸ್ಪತ್ರೆಗೆ ಹೋಗದೆ ಖಾಸಗಿ ಆಸ್ಪತ್ರೆಗೆ ಹೋಗಿರುವುದು ಎಲ್ಲೋ ಒಂದು ಕಡೆ ಮಗನ ಸಾವಿಗೆ ಇವರೇ ನೇರವಾಗಿ ಕಾರಣವಾಗಿದ್ದಾರೆ.
ಹಾಗೂ ಮಕ್ಕಳನ್ನು ಯಾವ ಆಸ್ಪತ್ರೆಗೆ ಸೇರಿಸಿದ್ದಾರೆಂದು ಹುಡುಕೋಕೆ ನಮಗೆ ಸಾಕಷ್ಟು ಸಮಯ ತೆಗೆದುಕೊಂಡಿತು’ ಎಂದು ಮೃತ ಜಯಣ್ಣ ಸ್ನೇಹಿತ ನವೀನ್ ತಿಳಿಸಿದರು ಎನ್ನಲಾಗಿದೆ. ಹಾಸನದ ಬಂಡಿ ಹಬ್ಬಕ್ಕೆ ಬರೋಬ್ಬರಿ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದು, ಹಾಸನದ ಇತಿಹಾಸದಲ್ಲೇ ಇದೇ ಮೊದಲು. ಬೆಳಗ್ಗೆಯಿಂದ ಸಂಜೆಯ ತನಕ ಸೇರಿದ್ದ ಜನಸಾಗರದ ಮಧ್ಯೆ ಆಂಬ್ಯುಲೆನ್ಸ್ ಕರೆತರಲು ತಡವಾಗಲು ಇದೂ ಒಂದು ಕಾರಣ. ಇನ್ನೂ ಕೆಲವು ಕಡೆ ರಸ್ತೆ ಉಬ್ಬುತಗ್ಗುಗಳನ್ನು ಹಾಕುವ ಮೂಲಕ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಿದರೆ ಅಪಘಾತ ತಪ್ಪಿಸಬಹುದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಎನ್ನಲಾಗುತ್ತಿದೆ.
















