ಮನೆ ಸುದ್ದಿ ಜಾಲ ಹೈದರಾಬಾದ್‌ : ನಿವೃತ್ತ ಐಪಿಎಸ್ ಅಧಿಕಾರಿ ಪತ್ನಿಯ ಕೊಲೆ

ಹೈದರಾಬಾದ್‌ : ನಿವೃತ್ತ ಐಪಿಎಸ್ ಅಧಿಕಾರಿ ಪತ್ನಿಯ ಕೊಲೆ

0

ಹೈದರಾಬಾದ್‌: ಪ್ರಶಾಸನ್ ನಗರದಲ್ಲಿ  ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ  ನಡೆದಿದೆ. 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿನಯ್ ರಂಜನ್ ರೇ ಅವರ ಪತ್ನಿ ತನುಜಾ (60) ಹತ್ಯೆಗೀಡಾದವರು ಎನ್ನಲಾಗಿದ್ದು. ರಾತ್ರಿ ಮಲಗಿದ್ದ ವೇಳೆ ತನುಜಾ ಅವರ ಕೈ- ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿದ ದುಷ್ಕರ್ಮಿಗಳು, ಬೆಲೆ ಬಾಳುವ ಆಭರಣಗಳೊಂದಿಗೆ ಪರಾರಿಯಾಗಿದ್ದು, ಪ್ರಜ್ಞೆ ತಪ್ಪಿದ ತನುಜಾ ಬೆಳಗಿನ ಜಾವ ಶವವಾಗಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೂಡ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣ ಕುರಿತು 10 ವಿಶೇಷ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಆಯಾ ತಂಡಗಳು ಲಕ್ನೋ, ಮುಂಬೈ ಮತ್ತು ನೇಪಾಳ ಗಡಿಗೆ ತೆರಳಿವೆ. ಕೊಲೆಯ ಬಳಿಕ ಆರೋಪಿಗಳು ನಾಂಪಲ್ಲಿಗೆ ಹೋಗಿ ಅಲ್ಲಿಂದ ಬೇರೆಡೆ ಪರಾರಿಯಾಗಿದ್ದಾರೆ. ನಾಂಪಲ್ಲಿ ರೈಲು ನಿಲ್ದಾಣಕ್ಕೆ ಆಟೋದಲ್ಲಿ ತಲುಪಿ, ತೆಲಂಗಾಣ ಎಕ್ಸ್‌ಪ್ರೆಸ್ ಹತ್ತಿ ರಾಜ್ಯ ತೊರೆದಿರುವ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಸೇವಕಿಯಾಗಿ ಕೆಲಸಕ್ಕೆ ಸೇರಿದ ಕಲ್ಪನಾ ಎಂಬ ನೇಪಾಳಿ ಮಹಿಳೆಯು ತನುಜಾ ಅವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕೆ ಇದೆ. ಇತರ ಇಬ್ಬರು ಪುರುಷರೊಂದಿಗೆ ಸೇರಿ ಈ ದುಷ್ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಇದ್ದ ನೇಪಾಳಿ ಮಹಿಳೆ, ಬಂದ ಕೆಲವು ದಿನಗಳಲ್ಲೇ ಎಲ್ಲರ ವಿಶ್ವಾಸ ಗಳಿಸಿದ್ದಳು. ಕಳ್ಳತನ ಮಾಡಲೆಂದೇ ಈ ದಾರಿ ಹುಡುಕಿಕೊಂಡು ಬಂದಿರಬಹುದು. ತನ್ನ ಇಬ್ಬರು ಸಹಚರರನ್ನು ಕರೆತಂದು ಮೊದಲು ಮನೆಯ ಸುತ್ತಲೂ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಆದರೆ ಅಂದುಕೊಂಡಂತೆ ಮಧ್ಯರಾತ್ರಿ ಮನೆಗೆ ನುಗ್ಗಿದ ಮೂವರು, ಕೋಣೆಯಲ್ಲಿ ಮಲಗಿದ್ದ ತನುಜಾ ಅವರ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ನಗದು ಮತ್ತು ಆಭರಣಗಳನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸಿಸಿಟಿವಿಯನ್ನು ಪರಿಶೀಲಿಸಲಾಗಿದ್ದು, ಗೋಡೆ ಹಾರಿ ಜುಬಿಲಿ ಹಿಲ್ಸ್‌ನ ಜರ್ನಲಿಸ್ಟ್ ಕಾಲೋನಿಯ ಕಡೆಗೆ ಓಡಿಹೋಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ( ಮೇ 8) ರಂದು ಬೆಳಗ್ಗೆ 7 ಗಂಟೆಯಾದರೂ ತನುಜಾ ಎಚ್ಚರಗೊಳ್ಳದಿದ್ದಾಗ, ಅವರ ಹೆಣ್ಣುಮಕ್ಕಳು ಕೋಣೆಗೆ ಹೋದಾಗ ಬಾಯಿಯಲ್ಲಿ ಬಟ್ಟೆಯೊಂದಿಗೆ ಬಿದ್ದಿರುವುದನ್ನು ನೋಡಿ ಗಾಬರಿಗೊಂಡು ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ತಕ್ಷಣ ತನುಜಾ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಾಹಿತಿ ಪಡೆದ ಜುಬಿಲಿ ಹಿಲ್ಸ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಆರೋಪಿಗಳು ಹಲವಡೆ ಹೀಗೆ ದರೋಡೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮನೆ ಮತ್ತು ಉದ್ಯಾನದ ಬಳಿ ಅವರು ಬೀಳಿಸಿದ್ದ ಎರಡು ಸೆಲ್‌ಫೋನ್‌ಗಳು ಮತ್ತು ಟೋಪಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿನಯ್ ರಂಜನ್ ರೇ ಜಂಟಿ ಆಂಧ್ರಪ್ರದೇಶದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2019 ರಲ್ಲಿ ಡಿಜಿ/ಐಜಿಪಿ ಯಾಗಿ ನಿವೃತ್ತರಾಗಿದ್ದಾರೆ.

ನಂತರ ಪ್ರಶಾಸನ್ ನಗರದಲ್ಲಿ ತಮ್ಮ ತಾಯಿ, ಪತ್ನಿ ತನುಜಾ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ, ಅವರು ತಮ್ಮ ವೃದ್ಧ ತಾಯಿಯನ್ನು ನೋಡಿಕೊಳ್ಳಲು ನೇಪಾಳಿ ಮಹಿಳೆ ಕಲ್ಪನಾಳನ್ನು ನೇಮಿಸಿಕೊಂಡಿದ್ದರು. ಅವರಿಗೆ ಮನೆಯಲ್ಲಿ ಒಂದು ಕೊಠಡಿ ಕೂಡ ನೀಡಿದ್ದರು. ರಂಜನ್ ರೇ ಅವರ ತಾಯಿ ಎರಡು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು, ಕಲ್ಪನಾಳ ಮೇಲೆ ನಂಬಿಕೆ ಇಟ್ಟಿದ್ದರಿಂದ ಅವರು ಇಲ್ಲಿಯೇ ಕೆಲಸ ಮುಂದುವರೆಸಿದ್ದಳು. ಮೂರು ಅಂತಸ್ತಿನ ಕಟ್ಟಡದಲ್ಲಿ, ಇಬ್ಬರು ಹೆಣ್ಣುಮಕ್ಕಳು ಎರಡನೇ ಮಹಡಿಯಲ್ಲಿ ಮತ್ತು ರಂಜನ್ ರೇ ಮತ್ತು ಅವರ ಪತ್ನಿ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ರಂಜನ್ ರೇ ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದರು. ಇದೇ ಸಮಯದಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂಭಾಗದಿಂದ ಒಳಗೆ ಹೋದರೆ, ಭದ್ರತಾ ಸಿಬ್ಬಂದಿಗೆ ಗೊತ್ತಾಗುತ್ತದೆ ಎಂದು ಭಾವಿಸಿ, ಮನೆಯ ಪಕ್ಕದಲ್ಲಿರುವ ಉದ್ಯಾನಕ್ಕೆ ಎದುರಾಗಿರುವ ಗೇಟ್ ಮೂಲಕ ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು, ಬೆಳಗಿನ ಜಾವ 1-1.30ರ ಸುಮಾರಿಗೆ ತನುಜಾಳ ಮಲಗುವ ಕೋಣೆಗೆ ತೆರಳಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.