ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-3 ಸಂಬಂಧಿಸಿದಂತೆ ಮಹತ್ವದ ಸೂಚನೆ ಹೊರಡಿಸಲಾಗಿದ್ದು, ಮೇ 28 ಈ ಪರೀಕ್ಷೆಗೆ ನೋಂದಣಿ ಸಲ್ಲಿಸಲು ಕೊನೆಯ ದಿನವಾಗಿದೆ. ಪರೀಕ್ಷೆಯನ್ನು ಜೂನ್ 9ರಿಂದ 20ರ ವರೆಗೆ ನಡೆಸಲಾಗುವುದು.
ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಅವಕಾಶ ಕಲ್ಪಿಸಿತ್ತು. ಅದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗ ಪರೀಕ್ಷೆ-3 ಮೂಲಕ ಮತ್ತೊಂದು ಅವಕಾಶ ನೀಡಲಾಗಿದೆ. ಫಲಿತಾಂಶ ಪೂರ್ಣಗಳ್ಳದ ಎಲ್ಲಾ ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೂ ನೊಂದಾಯಿಸಿಕೊಂಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಯನ್ನು ನಡೆಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಪರೀಕ್ಷೆ-3ಕ್ಕೆ ಈ ಕೆಳಗಿನ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ:
- ಮೊದಲ ಅಥವಾ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಅಥವಾ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು
- ನೋಂದಾಯಿಸಿಕೊಂಡು ಅನಿವಾರ್ಯ ಕಾರಣದಿಂದ ಪರೀಕ್ಷೆ ಬರೆಯದೆ ಇರುವವರು
- 2006ರಿಂದ ನಂತರದ ವರ್ಷಗಳಲ್ಲಿ ಅನುತ್ತೀರ್ಣರಾದ ಹಳೆಯ ವಿದ್ಯಾರ್ಥಿಗಳು
- ಈಗಿನ ಫಲಿತಾಂಶದಿಂದ ತೃಪ್ತರಾಗದೆ ಅಂಕ ಸುಧಾರಣೆಗೆ ಇಚ್ಛಿಸುವವರು
- ಹಾಜರಾತಿ ಕೊರತೆಯಿಂದ ಪರೀಕ್ಷೆ-1ನಲ್ಲಿ ನಿರ್ಬಂಧಿತರಾದವರು – ಇವರು ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಬಹುದು
ಪರೀಕ್ಷೆ-2ನಲ್ಲಿ ಹಾಜರಾದ ಮತ್ತು ಫಲಿತಾಂಶ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಪರಿಷತ್ ಪರೀಕ್ಷಾ ಶುಲ್ಕವನ್ನು ವಿನಾಯಿಸಿಕೊಟ್ಟಿದೆ. ಈ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಮರುಮೌಲ್ಯಮಾಪನ ಅಥವಾ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳೂ ಕೂಡಾ ಫಲಿತಾಂಶಕ್ಕಾಗಿ ಕಾಯದೆ ನಿಗದಿತ ದಿನಾಂಕದೊಳಗೆ ಪರೀಕ್ಷೆ-3ಕ್ಕೆ ನೋಂದಾಯಿಸಬಹುದು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ, ಎಲ್ಲ ಅರ್ಹ ವಿದ್ಯಾರ್ಥಿಗಳು ಮೇ 28ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರಗೊಳಿಸುವ ಮಹತ್ವದ ಅವಕಾಶವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಲಾಗಿದೆ.















