ಜೀವಂತಿಗೆ ಜೀವಹಾಲೆಬಳ್ಳಿ ಎಂಬ ಹೆಸರು ಇದೆ.ಇದೊಂದು ಬಳ್ಳಿಗಿಡವಾಗಿದ್ದು ಇದರಲ್ಲಿ ತಿಳಿಹಳದಿ ಬಣ್ಣದ ಸಸ್ಯಕ್ಷೀರವಿರುತ್ತದೆ.
ಸಸ್ಯವರ್ಣನೆ :
ಇದು ಸಾಮಾನ್ಯವಾಗಿ ಪೊದೆಗಳ ಮೇಲೆ ಮತ್ತು ಬೇಲಿಗಳ ಮೇಲೆ ಹಬ್ಬಿ ಬೆಳೆಯುವ ಬಳ್ಳಿ ಗಿಡ. ಬಲಿತ ಬಳ್ಳಿಕಾಂಡದ ತೊಗಟೆ ಒರಟಾಗಿದ್ದು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ ಅಂಡ ಹೃದಯಾಕಾರದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಯ ಬುಡ ಸಮಾನಾಂತರವಾಗಿರುತ್ತದೆ. ಎಲೆಯ ಕಂಕುಳಲ್ಲಿರುವ ಛತ್ರಿಯಂತಹ ಮಧ್ಯಾರಂಬಿ ಹೂ ಗೊಂಚಲಿನಲ್ಲಿರುವ ಹಸಿರು ಮಿಶ್ರಿತ ಹಳದಿ ಹೂಗಳಿರುತ್ತವೆ. ಒಂದೇ ತೊಟ್ಟಿನಲ್ಲಿ ಅಭಿಮುಖವಾಗಿರುವ ಜೋಡಿ ಕಾಯಿಗಳಂತಿರುತ್ತವೆ.
ಹವಾಗುಣ :
ಇದು ತಂಪನ್ನು ಬಯಸುವ ಬಳ್ಳಿಯಾಗಿದ್ದು ಶೇಕಡ 60 ರಿಂದ 70 ಆರ್ದ್ರತೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಬೇಸಾಯ ಕ್ರಮಗಳು :
ಇದನ್ನು ಬೀಜದಿಂದ ಅಥವಾ ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು.ತಾಜಾ ಬೀಜವನ್ನು ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿ ಒಂದು ದಿನ ನೀರಿನಲ್ಲಿ ನೆನಸಿಡಬೇಕು. ಆನಂತರ ಅದನ್ನು ಮಿಶ್ರಣ ತುಂಬಿದ ಕುಂಡಗಳಲ್ಲಿ ಬಿತ್ತಬೇಕು.
ಪೆನ್ಸಿಲ್ ಗಾತ್ರದ 15ರಿಂದ 20 ಸೆಂಟಿಮೀಟರ್ ಮೃದುಕಾಂಡದ ತುಂಡುಗಳನ್ನು ನಾಟಿ ಮಾಡುವುದಕ್ಕೆ ಉಪಯೋಗಿಸಬಹುದು ಪಾಲಿಥೀನ್ ಚೀಲದಲ್ಲಿ ಮರಳು, ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಪ್ರಮಾಣದಲ್ಲಿ ಹಾಕಿ ಕಾಂಡದ ತುಂಡುಗಳನ್ನು ನೆಟ್ಟರೆ 20 ದಿನಗಳಲ್ಲಿ ಅವು ಚಿಗುರೊಡೆಯುತ್ತವೆ.
ಕೊಯ್ಲು ಮತ್ತು ಇಳುವರಿ :
ಈ ಬಳ್ಳಿ ನೆಟ್ಟ 2 3 ತಿಂಗಳಿನಲ್ಲೇ ಕೊಯ್ಲಿಗೆ ಸಿದ್ದವಿರುತ್ತದೆ. ಪ್ರತಿ ತಾಜಾ ಎಲೆಗಳ ಇಳುವರಿ ಪ್ರತಿ ಬಳ್ಳಿಗೆ ಒಂದು ಕೆಜಿ ಲಭ್ಯ.
ಉಪಯುಕ್ತ ಭಾಗಗಳು :
ಎಲೆ, ಕಾಂಡ, ಬೇರು ಔಷಧಿ ಗುಣ ಹೊಂದಿವೆ.
ಔಷಧೀಯ ಗುಣಗಳು :
1. ಬಾಣಂತಿಯರಿಗೆ ಜೀವಂತಿಯನ್ನು ಆಹಾರದಲ್ಲಿ ನೀಡುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
2. ಜೀವಂತಿಯ ಬೇರನ್ನು ಅಲರ್ಜಿಯಿಂದಾಗಿ ಮೈಮೇಲೆ ಗಂಧೆಗಳಾದಾಗ ಲೇಪಿಸುವುದರಿಂದ ನವೆ, ಉರಿ ಕಡಿಮೆಯಾಗುತ್ತದೆ.
3. ಮಲಬದ್ಧತೆಯಿಂದ ಬಳಲುವವರು ಜೀವಂತಿ ಎಲೆಯ ರಸ ಇಲ್ಲವೇ ಬೇರಿನ ಕಷಾಯ ತಯಾರಿಸಿಕೊಂಡು ಕುಡಿಯಬೇಕು.
4. ಕೆಮ್ಮಿನಿಂದ ಬಳಲುವರಿಗೆ ಜೀವಂತಿಯ ಬೇರಿನ ಕಷಾಯ ಉತ್ತಮವಾದದ್ದು.
5. ಮಕ್ಕಳಿಗೆ ಜೀವಂತಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ನೀಡುವುದರಿಂದ ರೋಗನಿರೋಧಕ ಶಕ್ತಿ ಅಧಿಕಗೊಂಡು ಕಾಯಿಲೆಗಳು ಭಾದಿಸಲಾರವು
6. ಜೀವಂತಿ ಪಶುಗಳಿಗೂ ದನಕರುಗಳು ಉತ್ತಮ ಆಹಾರ.
ಅಡುಗೆ :
ಜೀವಂತಿಯನ್ನು ತರಕಾರಿಯಾಗಿ ಅಡುಗೆಯಲ್ಲಿ ಬಳಸಬಹುದು. ಪಲ್ಯ, ತಂಬುಳಿ, ಮುಂತಾದವುಗಳನ್ನು ತಯಾರಿಸಬಹುದು. ಇದು ದೇಹಕ್ಕೆ ಪುಷ್ಟಿಕರವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪಲ್ಯ: ಜೀವಂತಿಯ ಎಲೆ ಮತ್ತು ಕಾಂಡವನ್ನು ಸಣ್ಣದಾಗಿ ಹಚ್ಚಿಕೊಂಡು ಒಗ್ಗರಣೆಗೆ ಹಾಕಿ ಸ್ವಲ್ಪ ಬೇಯಿಸಿ ತೊಗರಿಬೆಳೆಯನ್ನು ಕುದಿಸಿ ಅದರೊಂದಿಗೆ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಪಲ್ಯ ತಯಾರಿಸಬಹುದು ಇದು ಬಾಣಂತಿಯರಿಗೆ ಅತ್ಯಂತ ಉಪಯುಕ್ತ.
ತಂಬಳಿ : ಜೀವಂತಿಯನ್ನು ಜೀರಿಗೆಯೊಂದಿಗೆ ಸ್ವಲ್ಪ ಎಣ್ಣೆಯಲ್ಲಿ ಹುರಿದು ಕೊಬ್ಬರಿ ತುರಿ ಸೇರಿಸಿ ರುಬ್ಬಿಕೊಂಡು ಮೊಸರಿನಲ್ಲಿ ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಬೇಕು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬಹುದು.