ಏನಾದ್ರೂ ಸ್ಪೆಷಲ್ ರೆಸಿಪಿ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ನಾವು ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ವಾಲ್ನಟ್ ಬ್ರೌನಿಯನ್ನು ಯಾವ ರೀತಿ ತಯಾರಿಸುವುದು ಎಂದು ತಿಳಿಸಿಕೊಡುತ್ತಿದ್ದೇವೆ. ನೀವೂ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನ ಟ್ರೈ ಮಾಡಿ. ಖಂಡಿತವಾಗಿ ಈ ಬ್ರೌನಿ ಎಲ್ಲರಿಗೂ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿ:
ಬೆಣ್ಣೆ – 2 ಚಮಚ
ಡಾರ್ಕ್ ಚಾಕೋಲೆಟ್ – 30 ಗ್ರಾಂ
ಸಕ್ಕರೆ ಪುಡಿ – ರುಚಿಗೆ ತಕ್ಕಷ್ಟು
ವೆನಿಲ್ಲಾ – ಕೆಲವು ಹನಿಗಳು
ಮೈದಾ ಹಿಟ್ಟು – 35 ಗ್ರಾಂ
ಹಾಲು – 2 ಚಮಚ
ಬಾಕಲೇಟ್ ತುಂಡು – 5 ರಿಂದ 9
ಬಟರ್ ಪೇಪರ್
ಮೈಕ್ರೋವೇವ್
ಮಾಡುವ ವಿಧಾನ : ಮೊದಲಿಗೆ ಚಾಕೋಲೆಟ್ಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮತ್ತು ಬೆಣ್ಣೆಯೊಂದಿಗೆ ಸೇರಿಸಿ, ಬೆಣ್ಣೆ ಮತ್ತು ಚಾಕೊಲೆಟ್ ಕರಗುವವರೆಗೆ ಮೈಕ್ರೋವೇವ್ನಲ್ಲಿ ಇರಿಸಿ. ನಂತರ ಸಕ್ಕರೆ, ಹಾಲು, ವೆನಿಲ್ಲಾ, ಮೈದಾ, ವಾಲ್ನಟ್ ಅನ್ನು ಮೊದಲೇ ತಯಾರಿಸಿದ ಚಾಕೋಲೆಟ್ ಮಿಶ್ರಣಕ್ಕೆ ಸೇರಿಸಿ. ಮೃದುವಾಗಿ ಎಲ್ಲವನ್ನೂ ಕಲಸಿ.
ಈಗ ಪಾತ್ರೆಯ ಗಾತ್ರಕ್ಕೆ ಅನುಗುಣವಾಗಿ ಬಟರ್ ಪೇಪರ್ ಅನ್ನು ಕತ್ತರಿಸಿ. ಮತ್ತು ಪಾತ್ರೆಯ ತಳಭಾಗ ಮತ್ತು ಬದಿ ಭಾಗಗಳಿಗೆ ಬೆಣ್ಣೆ ಪೇಪರ್ ಅಂಟಿಸಿಕೊಳ್ಳಿ. ನಂತರ ಮೊದಲೇ ತಯಾರಿಸಿಟ್ಟ ಹಿಟ್ಟನ್ನು ಬಟರ್ ಪೇಪರ್ ಹಾಕಿದ ಕಂಟೇನರ್ ಒಳಗೆ ಸುರಿಯಿರಿ. ಮತ್ತು ಅದು ಸಮವಾಗಿ ಹರಡಿಕೊಳ್ಳುವಂತೆ ಮಾಡಿ. ನಂತರ ರುಚಿಗೆ ಸ್ವಲ್ಪ ಹುರಿದ ವಾಲ್ನಟ್ ಹಾಗೂ ಚಾಕೋಲೆಟ್ ತುಂಡುಗಳಿಂದ ಮಿಶ್ರಣದ ಮೇಲ್ಭಾಗವನ್ನು ಅಲಂಕರಿಸಿ.
15 ಸೆಕೆಂಡುಗಳ ಕಾಲ ಚಾಕೋಲೆಟ್ ಬ್ರೌನಿಯ ಮಿಶ್ರಣವನ್ನು ಮೈಕ್ರೋ ಓವನ್ನಲ್ಲಿ ಬೇಯಲು ಇರಿಸಿ. ಬಳಿಕ ಚಾಕು ಮೂಲಕ ಅದು ಬೆಂದಿದೆಯಾ ಎಂದು ಪರಿಶೀಲಿಸಿ. ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ಸಮಯಗಳ ಕಾಲ ಬೇಯಿಸಿಕೊಳ್ಳಿ. ಬೆಂದ ಬಳಿಕ ಪಾತ್ರೆಯಿಂದ ಬ್ರೌನಿಯನ್ನು ತೆಗೆದು ಒಂದು ಪ್ಲೇಟ್ನಲ್ಲಿ ಇಟ್ಟು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಈಗ ರುಚಿಯಾದ ಚಾಕೋಲೆಟ್ ವಾಲ್ನಟ್ ಬ್ರೌನಿ ಸವಿಯಲು ಸಿದ್ಧ.















