ಮನೆ ಸುದ್ದಿ ಜಾಲ ಎಲ್ ನಿನೋ ಪ್ರಭಾವದಿಂದ ಮುಂಗಾರು ಮುನ್ಸೂಚನೆ ಬದಲಾವಣೆ: ಜೂನ್‌ನಲ್ಲಿ ಮಳೆ ಕಡಿಮೆ, Heatwave ಹೆಚ್ಚಳ ಸಾಧ್ಯತೆ...

ಎಲ್ ನಿನೋ ಪ್ರಭಾವದಿಂದ ಮುಂಗಾರು ಮುನ್ಸೂಚನೆ ಬದಲಾವಣೆ: ಜೂನ್‌ನಲ್ಲಿ ಮಳೆ ಕಡಿಮೆ, Heatwave ಹೆಚ್ಚಳ ಸಾಧ್ಯತೆ ಎಂದ IMD

0

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) 2026ರ ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಅಂದಾಜನ್ನು ಪರಿಷ್ಕರಿಸಿದೆ. ಈ ಬಾರಿ ಹಂಗಾಮಿ ಮಳೆಯ ಪ್ರಮಾಣವನ್ನು ದೀರ್ಘಾವಧಿ ಸರಾಸರಿ (LPA)ಯ 92 ಶೇಕಡೆಯಿಂದ 90 ಶೇಕಡೆಗೆ ಇಳಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಪರಿಷ್ಕೃತ ಮುನ್ಸೂಚನೆಯ ಪ್ರಕಾರ, ಜೂನ್ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ಉಷ್ಣ ಅಲೆ (Heatwave) ದಿನಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು IMD ಎಚ್ಚರಿಕೆ ನೀಡಿದೆ.2026ರ ಜೂನ್ ರಿಂದ ಸೆಪ್ಟೆಂಬರ್ ವರೆಗೆ ಇರುವ ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಎರಡನೇ ಹಂತದ ದೀರ್ಘಾವಧಿ ಮುನ್ಸೂಚನೆಯಲ್ಲಿ, ದೇಶದ ಪ್ರಮುಖ ಮುಂಗಾರು ಪ್ರದೇಶಗಳಲ್ಲಿ LPAಯ 90 ಶೇಕಡಾ ಮಳೆಯಾಗುವ ನಿರೀಕ್ಷೆ ಇದೆ ಎಂದು IMD ತಿಳಿಸಿದೆ.

ಪ್ರದೇಶವಾರು ಮಳೆಯ ಸ್ಥಿತಿಯನ್ನು ಗಮನಿಸಿದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ LPAಯ 94ರಿಂದ 106 ಶೇಕಡಾ ಮಳೆಯಾಗಬಹುದು ಎಂದು ಇಲಾಖೆ ಅಂದಾಜಿಸಿದೆ.ಆದರೆ ದಕ್ಷಿಣ ದ್ವೀಪಕಲ್ಪ, ಮಧ್ಯ ಭಾರತ ಹಾಗೂ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ವಾಯುವ್ಯ ಭಾರತದಲ್ಲಿ LPAಯ 92 ಶೇಕಡಕ್ಕಿಂತಲೂ ಕಡಿಮೆ ಮಳೆಯಾಗಬಹುದು ಎಂದು IMD ಹೇಳಿದೆ.

ಇದಲ್ಲದೆ, ಈ ಬಾರಿ ಮುಂಗಾರು ಪ್ರವೇಶವೂ ತಡವಾಗುವ ಸಾಧ್ಯತೆ ಇದೆ. ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಆಗಮಿಸಲಿದೆ ಎಂದು ಮೊದಲು ಅಂದಾಜಿಸಲಾಗಿದ್ದರೂ, ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಪ್ರವೇಶಿಸುತ್ತದೆ ಎಂದು ಇಲಾಖೆ ತಿಳಿಸಿದೆ.

ಮಳೆ ಪ್ರಮಾಣ ಇಳಿಕೆ ಸಾಧ್ಯತೆ

ವಿಜ್ಞಾನಿಗಳ ಪ್ರಕಾರ, ದೇಶದಲ್ಲಿ “ಕಡಿಮೆ ಮಳೆ” (Deficient Rainfall) ಪರಿಸ್ಥಿತಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. LPAಯ 89 ಶೇಕಡಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. 90ರಿಂದ 95 ಶೇಕಡಾ ನಡುವಿನ ಮಳೆಯನ್ನು “ಸಾಮಾನ್ಯಕ್ಕಿಂತ ಕಡಿಮೆ ಮಳೆ” ಎಂದು ವರ್ಗೀಕರಿಸಲಾಗುತ್ತದೆ.IMD ಮಾಹಿತಿ ಪ್ರಕಾರ, ಮುಂಗಾರು ಅವಧಿಯಲ್ಲಿ ದುರ್ಬಲದಿಂದ ಮಧ್ಯಮ ಮಟ್ಟದ ಎಲ್ ನಿನೋ (El Niño) ಪರಿಣಾಮ ಮುಂದುವರಿಯುವ ಸಾಧ್ಯತೆ ಇದೆ. ಮುಂಗಾರು ನಂತರ ಬಲಿಷ್ಠ ಎಲ್ ನಿನೋ ರೂಪುಗೊಳ್ಳುವ ಸಾಧ್ಯತೆಯನ್ನೂ ಇಲಾಖೆ ಸೂಚಿಸಿದೆ.ಜೂನ್ 2026ರಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ. ಆದರೆ ತೆಲಂಗಾಣ, ಆಂಧ್ರಪ್ರದೇಶ, ಈಶಾನ್ಯ ಭಾರತ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಜೂನ್ ತಿಂಗಳ ಸರಾಸರಿ ಮಳೆಯ ಪ್ರಮಾಣ 166.9 ಮಿ.ಮೀ ಎಂದು IMD ತಿಳಿಸಿದೆ.

Heatwave ದಿನಗಳ ಸಂಖ್ಯೆ ಹೆಚ್ಚಳ

ಜೂನ್ ತಿಂಗಳಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ. 2ರಿಂದ 3 ದಿನಗಳವರೆಗೆ ಹೆಚ್ಚುವರಿ ಉಷ್ಣ ಅಲೆ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗುಜರಾತ್ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ Heatwave ದಿನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು IMD ಮಾಹಿತಿ ನೀಡಿದೆ.