ಮನೆ ರಾಷ್ಟ್ರೀಯ ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ: ಅರವಿಂದ ಕೇಜ್ರಿವಾಲ್

ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ: ಅರವಿಂದ ಕೇಜ್ರಿವಾಲ್

0

ನವದೆಹಲಿ: ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ತಿಳಿಸಿದರು.

Join Our Whatsapp Group

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎದುರಾದ ಸೋಲಿನ ಬಳಿಕ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಕೇಜ್ರಿವಾಲ್, ‘ನಮ್ಮ ಪಕ್ಷವು ಜನರ ಸೇವೆಯಲ್ಲಿ ಮುಂದುವರಿಯಲಿದ್ದು, ವಿರೋಧ ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ ಎಂದು ಹೇಳಿದ್ದಾರೆ.

ಇಂದು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದಿದೆ. ದೆಹಲಿ ಜನಾದೇಶವನ್ನು ನಾವು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಬಿಜೆಪಿಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಬಿಜೆಪಿಗೆ ಸಾಧ್ಯವಾಗಲಿ ಎಂದು ಹಾರೈಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಜನರು ನಮಗೆ ನೀಡಿರುವ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಶಿಕ್ಷಣ, ಆರೋಗ್ಯ, ನೀರಾವರಿ, ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ನೆರವಾಗಿದ್ದೇವೆ. ದೆಹಲಿಯ ಮೂಲಸೌಕರ್ಯದಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ನಾವು ರಾಜಕಾರಣಕ್ಕೆ ಬಂದಿಲ್ಲ. ಜನರ ಸೇವೆಗಾಗಿ ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹಾಗಾಗಿ ಸಮಾಜ ಸೇವೆ, ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಮುಂದುವರಿಸಲಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಚುನಾವಣೆಯಲ್ಲಿ ದುಡಿದ ಎಎಪಿ ಪಕ್ಷದ ಕಾರ್ಯಕರ್ತರಿಗೂ ಕೇಜ್ರಿವಾಲ್ ಧನ್ಯವಾದ ಸಲ್ಲಿಸಿದ್ದಾರೆ.