ರಾಯಚೂರು: ಸಿರವಾರ ತಾಲೂಕಿನ ಅತ್ತನೂರು ಗ್ರಾಮದ 14 ವರ್ಷದ ತರುಣ್ ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾನೆ.
ತರುಣ್ ಸಿರವಾರ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಎಂದಿನಂತೆ ತರುಣ ಬುಧವಾರ ಶಾಲೆಗೆ ಹೋಗಿದ್ದಾನೆ.
ತರಗತಿಯಲ್ಲಿ ಪಾಠ ಕೇಳುವಾಗ, ತಲೆ ಸುತ್ತು ಎನ್ನುತ್ತಾ ತರುಣ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವಿದ್ಯಾರ್ಥಿ ತರುಣ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರ ತಿಳಿದು ತರುಣ್ ಪೋಷಕರು ಆಸ್ಪತ್ರೆಗ ದೌಡಾಯಿಸಿದ್ದಾರೆ. ವೈದ್ಯರು ತರುಣ್ಗೆ ಲೋ ಬಿಪಿ ಆಗಿದೆ ಅಂತ ಹೇಳಿದ್ದಾರೆ.
ಬಳಿಕ, ವೈದ್ಯರು ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ತರುಣ್ನನ್ನು ರಾಯಚೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ತರುಣ್ ಮೃತಪಟ್ಟಿದ್ದಾನೆ. ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಾಗಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.