ಮನೆ ರಾಜ್ಯ ಭರ್ತಿಯಾಗುತ್ತಿದೆ ರಕ್ಕಸಕೊಪ್ಪ ಜಲಾಶಯ

ಭರ್ತಿಯಾಗುತ್ತಿದೆ ರಕ್ಕಸಕೊಪ್ಪ ಜಲಾಶಯ

0

ಬೆಳಗಾವಿ ((Bellagavi): ನಿರಂತರ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗುತ್ತ ಸಾಗಿದೆ.

ಈಗ ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಉಳಿದಿದ್ದು, ಹೆಚ್ಚುವರಿ ನೀರನ್ನು ಭಾನುವಾರ ಬೆಳಿಗ್ಗೆಯಿಂದ ನದಿಗೆ ಹರಿಸಲಾಗುತ್ತಿದೆ. ಈ ಜಲಾಶಯ 2,475 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಭಾನುವಾರ ಬೆಳಿಗ್ಗೆಯವರೆಗೆ ನೀರಿನ ಮಟ್ಟ 2,473.50 ಅಡಿಗೆ ಏರಿಕೆಯಾಗಿದೆ. ಭರ್ತಿಗೆ ಕೇವಲ ಒಂದೂವರೆ ಅಡಿ ಬಾಕಿ ಇದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಜಲಾಶಯ ಪ್ರತಿ ವರ್ಷ ಜುಲೈ ಅಂತ್ಯಕ್ಕೆ ಭರ್ತಿಯಾಗುತ್ತಿತ್ತು. ಈ ಬಾರಿ ಖಾನಾಪುರ, ಬೆಳಗಾವಿ ತಾಲ್ಲೂಕು ಹಾಗೂ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಮಳೆಯಾದ ಕಾರಣ ಜುಲೈ 3ನೇ ವಾರಕ್ಕೆ ಭರ್ತಿಯಾಗುವ ಹಂತ ತಲುಪಿದೆ. ನದಿ ದಡದ ರೈತರು ಎಚ್ಚರಿಕೆ ವಹಿಸುವಂತೆ ಜಲಮಂಡಳಿ ಅಧಿಕಾರಿಗಳು ಸೂಚಿಸಿದ್ದಾರೆ.

ಒಂದೆಡೆ ರಕ್ಕಸಕೊಪ್ಪ ಭರ್ತಿಯಾಗಿದ್ದರೆ, ಮತ್ತೊಂದೆಡೆ ಗರಿಷ್ಠ 51 ಟಿಎಂಸಿ ಸಾಮರ್ಥ್ಯದ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಭಾನುವಾರ 27.57 ಟಿಎಂಸಿ ನೀರು ಸಂಗ್ರಹವಾಗಿದೆ. ಎರಡೂ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನಗರವಾಸಿಗಳಲ್ಲಿ ಸಂತಸ ಮೂಡಿದೆ.

ಮಲಪ್ರಭಾ ನದಿ ಪಾತ್ರದ ಹರಿವು ಹೆಚ್ಚಾದ ಕಾರಣ ಗೋಕಾಕ ಹೊರವಲಯದ ಶಿಂಗಳಾಪುರ ಸೇತುವೆ ಮೇಲೆ ಶನಿವಾರ ಸಂಜೆಯಿಂದಲೇ ನೀರು ಹರಿಯುತ್ತಿದೆ. ಭಾನುವಾರ ನೀರಿನ ಸೆಳವು ಹೆಚ್ಚಾದ್ದರಿಂದ ಸೇತುವೆ ಸಂಚಾರ ಬಂದ್ ಮಾಡಲಾಗಿದೆ.

ಹಿಂದಿನ ಲೇಖನಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಅಭಿವೃದ್ಧಿ ಕೆಲಸಗಳೇ ವರದಾನ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಮುಂದಿನ ಲೇಖನಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಆಯ್ಕೆ