ಮೈಸೂರು : ಮೈಸೂರಿನಲ್ಲಿ ಹೆಚ್ಚಿನ ಲಾಭದ ಆಸೆಯಿಂದ ನಿವೃತ್ತ ಅಧಿಕಾರಿಯೊಬ್ಬರು ಆನ್‌ಲೈನ್‌ಲ್ಲಿ ನಕಲಿ ಕಂಪೆನಿ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಬರೋಬ್ಬರಿ 1.10 ಕೋಟಿ ರೂ.ಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ನಗರದ ವಿದ್ಯಾರಣ್ಯಪುರಂ ನಿವಾಸಿ, 61 ವರ್ಷ ವಯೋಮಾನದ ನಿವೃತ್ತ ಅಧಿಕಾರಿ ವಂಚಕರ ಮಾತಿಗೆ ಮರುಳಾಗಿ ಹಣ ಕಳೆದುಕೊಂಡವರು. ಅವರಿಗೆ ಸ್ಟಾಕ್ ಮಾರ್ಕೆಟ್ ಥಿಂಕ್ ಟ್ಯಾಂಕ್ ಎಂಬ ವಾಟ್ಸಾಪ್ ಗ್ರೂಪ್‌ನಿಂದ ಸಂದೇಶ ಬಂದಿದೆ.
ಅದರಲ್ಲಿ ಷೇರು ಮಾರುಕಟ್ಟೆ ಹಾಗೂ ಹೂಡಿಕೆ ಬಗ್ಗೆ ವಂಚಕರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅವರು ಗೂಗಲ್‌ನಲ್ಲಿ ಹುಡುಕಿದ ವೇಳೆ ಕಂಪೆನಿ ಅಸ್ತಿತ್ವದಲ್ಲಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಅವರು ವಂಚಕರೊಂದಿಗೆ ಮಾತುಕತೆ ಮುಂದುವರಿಸಿ ದ್ದಾರೆ. ನಂತರ ತೀನಾ ಮಲ್ಲೋತ್ರ ಎಂಬಾತ ಇವರೊಂದಿಗೆ ಮಾತನಾಡಿ ಹೆಚ್ಚಿನ ಹೂಡಿಕೆ ಮಾಡುವಂತೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂದು ನಂಬಿಸಿದ್ದ. ನಂತರ ಅವರು ಹಣವನ್ನು ಹೂಡಿಕೆ ಮಾಡಿದ್ದಾರೆ.
ಹೆಚ್ಚಿನ ಹೂಡಿಕೆ ಮಾಡುವಂತೆ ಹಾಗೂ ಹೆಚ್ಚಿನ ಲಾಭತಂದುಕೊಡುತ್ತೇನೆ ಎಂದು ನಂಬಿಸಿದ್ದಾನೆ. ಹಾಗಾಗಿ ಆತ ಹೇಳಿದ ಖಾತೆಗೆ ಅವರು ಹಂತಹಂತವಾಗಿ 1,10,04,600 ರೂ. ವರ್ಗಾಯಿಸಿದ್ದಾರೆ. ನಂತರ ಅವರಿಗೆ ಯಾವುದೇ ಲಾಭ ಬಂದಿಲ್ಲ. ಬೇಸರಗೊಂಡ ಅವರು ಹಣ ಹಿಂಪಡೆಯಲು ಯತ್ನಿಸಿದ್ದಾರೆ. ಆದರೆ, ವಂಚಕರು /ಹಣ ಪಡೆದುಕೊಳ್ಳಲು ಬ್ರೋಕರೇಜ್ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಇದರಿಂದಾಗಿ ತಾನು ವಂಚನೆಗೆ ಒಳಗಾಗಿದ್ದೇನೆ ಎಂಬುದು ಅವರಿಗೆ ಗೊತ್ತಾಗಿದೆ. ಈ ಸಂಬಂಧ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೇ.
ಹೆಚ್ಚುತ್ತಿರುವ ವಂಚನೆ ಪ್ರಕರಣಗಳು : ಇದು ನಿಜಕ್ಕೂ ಆಶ್ಚರ್ಯಕರ ವಿಚಾರವಾಗಿದೆ. ಸೈಬರ್ ವಂಚನೆ ಸಂಬಂಧ ಮಾಧ್ಯಮಗಳಲ್ಲಿ ಆಗಾಗ್ಗೆ ಸುದ್ದಿಗಳು ಪ್ರಕಟವಾಗುತ್ತಿವೆ. ಆದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮತ್ತೊಂದು ಆಶ್ಚರ್ಯವೆಂದರೆ ವಂಚನೆಗೆ ಒಳಗಾಗುತ್ತಿರುವವರಲ್ಲಿ ವಿದ್ಯಾವಂತರ ಪಾಲೇ ಹೆಚ್ಚು. ಅದರಲ್ಲಿಯೂ, ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳು ಹಾಗೂ ನಿವೃತ್ತ ಅಧಿಕಾರಿಗಳೇ ಈ ಜಾಲಕ್ಕೆ ಬಲಿಯಾಗುತ್ತಿದ್ದಾರೆ.

















