ರಾಯಚೂರು: ರಾಯಚೂರಿನ ಸಿಂಧನೂರಿನಲ್ಲಿ ಶುಕ್ರವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸ್ ಹೊಗುತ್ತಿರುವಾಗ ನಾಲ್ವರು ವಿದ್ಯಾರ್ಥಿನಿಯರ ಮೇಲೆ ನಿಯಂತ್ರಣ ತಪ್ಪಿ ಕಾರು ಹರಿದಿದ್ದ ಪರಿಣಾಮವಾಗಿ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ಜಿಲ್ಲೆಯ ಸಿಂಧನೂರು ನಗರದ ಗಂಗಾವತಿ ಮುಖ್ಯರಸ್ತೆಯ ಎವಿಎಸ್ ಬ್ರಿಲಿಯಂಟ್ ಕಾಲೇಜು ಸಮೀಪ ಈ ರ್ದುಘಟನೆ ಸಂಭವಿಸಿದೆ. ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪಿನ ನಿವಾಸಿಯಾದ ಭೂಮಿಕಾ(17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಮಹೇಶ್ವರಿ, ಮೇಘನಾ ಹಾಗೂ ಜಹೀಬಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ವಿದ್ಯಾರ್ಥಿನಿಯರು ಎವಿಎಸ್ ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹೇಂದ್ರ ತಾರ್ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ವಿದ್ಯಾರ್ಥಿನಿಯರ ಮೇಲೆ ಹರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತ್ತಾಗಿ ಘಟನೆಯ ಮಾಹಿತಿ ತೀಳಿದು ಕೂಡಲೇ ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಹಾಗೂ ನಗರ ಪೊಲೀಸ್ ಠಾಣೆಯ ಪಿಐ ವೀರಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
















