ಮನೆ ಸುದ್ದಿ ಜಾಲ 604 ರೂ  ಕೋಟಿ ವೆಚ್ಚದಿಂದ ದೇವಸ್ಥಾನ ಅಭಿವೃದ್ಧಿಗೆ ಯೊಜನೆ : ಕುಕ್ಕೆ ಸುಬ್ರಹ್ಮಣ್ಯ

604 ರೂ  ಕೋಟಿ ವೆಚ್ಚದಿಂದ ದೇವಸ್ಥಾನ ಅಭಿವೃದ್ಧಿಗೆ ಯೊಜನೆ : ಕುಕ್ಕೆ ಸುಬ್ರಹ್ಮಣ್ಯ

0

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ರಾಜ್ಯದ ನಂಬರ್ ಒನ್ ಮತ್ತು ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ರೂ.604.65 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೂರು ಹಂತಗಳಲ್ಲಿ ಒಟ್ಟು 19 ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಭಕ್ತರ ಅನುಕೂಲ ಹಾಗೂ ದೇವಸ್ಥಾನದ ಮೂಲಸೌಕರ್ಯ ವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪ್ರವರ್ಗ-ಎ ದೇವಸ್ಥಾನವಾಗಿರುವ ಕುಕ್ಕೆ ಕ್ಷೇತ್ರಕ್ಕೆ ಪ್ರತಿದಿನ ಸರಾಸರಿ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದು, ಹಬ್ಬ-ಹರಿದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 9 ಪ್ರಮುಖ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಸುತ್ತುಪೌಳಿ ಮರುನಿರ್ಮಾಣ, ಯಾಗಶಾಲೆ ನಿರ್ಮಾಣ, ವಸತಿ ಗೃಹಗಳು, ಡಾರ್ಮೆಂಟರಿ ಕಟ್ಟಡಗಳು, ದೇವಸ್ಥಾನ ಸಿಬ್ಬಂದಿಗಾಗಿ ವಸತಿ ಸಮುಚ್ಚಯ, ಅನ್ನದಾಸೋಹ ಭವನ, ಪಾರಂಪರಿಕ ರಥಬೀದಿ ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ಹಾಗೂ ಆಶ್ಲೇಷ ಬಲಿ ಮಂಟಪ ಸೇರಿದಂತೆ ಒಟ್ಟು 19 ವಿವಿಧ ಕಾಮಗಾರಿಗಳನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ. ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಯೋಜನೆಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಲಾಗಿದೆ.

ಹಾಗೂ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗ ಕಚೇರಿಯನ್ನೂ ತೆರೆಯಲಾಗಿದೆ. ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದ ಸಮಗ್ರ ಅಭಿವೃದ್ಧಿಯೊಂದಿಗೆ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ.