ಮನೆ ಆಟೋ ಮೊಬೈಲ್ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಿವು!

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಿವು!

0

ಹೊಸ ತಂತ್ರಜ್ಞಾನ ಪ್ರೇರಿತ ಸುಧಾರಿತ ಕಾರುಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ವಿನೂತನ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿವೆ. ಹೊಸ ಕಾರು ಮಾದರಿಗಳಲ್ಲಿ ಸಾಮಾನ್ಯ ಆವೃತ್ತಿಗಳ ಜೊತೆಗೆ ಪರ್ಫಾಮೆನ್ಸ್ ಮತ್ತು ಆಫ್ ರೋಡ್ ಕಾರು ಮಾದರಿಗಳು ಸಹ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿವೆ.

Join Our Whatsapp Group

ಮಾರುತಿ ಸುಜುಕಿ ಜಿಮ್ನಿ

ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಜಿಮ್ನಿ 5 ಡೋರ್ ಆಫ್ ರೋಡ್ ಎಸ್ ಯುವಿ ಮಾದರಿಯನ್ನು ಜೂನ್ ಮಧ್ಯಂತರದಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಹೀಂದ್ರಾ ಥಾರ್ ಕಾರಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಆಫ್ ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಅಭಿವೃದ್ದಿಗೊಂಡಿದ್ದು, 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ. ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಹೊಂದಿರಲಿದೆ.

ಹ್ಯುಂಡೈ ಎಕ್ಸ್‌ಟರ್

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ಎಕ್ಸ್ಟರ್ ಮೈಕ್ರೊ ಎಸ್ ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಜೂನ್ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ. ಟಾಟಾ ಪಂಚ್ ಕಾರಿಗೆ ಪೈಪೋಟಿಯಾಗಿ ಎಕ್ಸ್‌ ಟರ್ ಬಿಡುಗಡೆಯಾಗುತ್ತಿದ್ದು, ಒಟ್ಟು ಐದು ವೆರಿಯೆಂಟ್ ಗಳೊಂದಿಗೆ 1.2 ಲೀಟರ್ ಎನ್ಎ ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರಿನಲ್ಲಿ ಸನ್‌ರೂಫ್, 8 ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್ ಗಳಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 6 ಲಕ್ಷದಿಂದ ರೂ. 11 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಯಿದೆ.

ಹೋಂಡಾ ಎಲಿವೇಟ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ಎಲಿವೇಟ್ ಎಸ್ ಯುವಿ ಮಾದರಿಯನ್ನ ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಕಂಪ್ಯಾಕ್ಟ್ ಎಸ್ ಯುವಿ ವಿನ್ಯಾಸದೊಂದಿಗೆ ವಿನೂತನ ಫೀಚರ್ಸ್ ಹೊಂದಿರಲಿದೆ ಹೊಸ ಕಾರು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಕಾರು ಸಿಟಿ ಸೆಡಾನ್ ಮಾದರಿಯಲ್ಲಿರುವಂತೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.

ಸಿಟ್ರನ್ ಸಿ3 ಏರ್ ಕ್ರಾಸ್

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಟ್ರನ್ ಕಂಪನಿ ತನ್ನ ಬಹುನೀರಿಕ್ಷಿತ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾಗುತ್ತಿದೆ. ಭಾರತದಲ್ಲಿ ಸದ್ಯಕ್ಕೆ ಸಿ3, ಇ ಸಿ3 ಎಲೆಕ್ಟ್ರಿಕ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಸಿಟ್ರನ್ ಕಂಪನಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಪೈಪೋಟಿಯಾಗಿ ಹೊಸ ಕಾರನ್ನ ರಸ್ತೆಗಿಳಿಸುತ್ತಿದೆ. ಹೊಸ ಕಾರು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಅತ್ಯಾಧುನಿಕ ವಿನ್ಯಾಸ ಭಾಷೆ ಹೊಂದಿರಲಿದೆ. ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಮರ್ಸಿಡಿಸ್ ಎಎಂಜಿ ಎಸ್ ಎಲ್55

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಹಲವಾರು ಎಎಂಜಿ ಕಾರು ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಎಸ್ ಎಲ್55 ಕನ್ವರ್ಟಬಲ್ ಕಾರು ಮಾದರಿಯನ್ನು ಎಎಂಜಿ ಸರಣಿಯಲ್ಲಿ ಮರುಪರಿಚಯಿಸುತ್ತಿದೆ. ಹೊಸ ಕಾರು 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಇದು 478 ಹಾರ್ಸ್ ಪವರ್ ನೊಂದಿಗೆ 700 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಪ್ರಮುಖ ಸೂಪರ್ ಕಾರು ಆವೃತ್ತಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 1.20 ಕೋಟಿ ಬೆಲೆ ಹೊಂದಿರಬಹುದಾಗಿದೆ.

ಹಿಂದಿನ ಲೇಖನಈ ರಾಶಿಯವರೆಂದರೆ ಕುಬೇರನಿಗೆ ತುಂಬಾ ಇಷ್ಟವಂತೆ
ಮುಂದಿನ ಲೇಖನ‘ರಾಮಸಿತಾರ ಅಚಲಚರೀತೆ…’ : “ಆದಿಪುರುಷ್‌” ಚಿತ್ರದ ಮತ್ತೊಂದು ಗೀತೆ ಬಿಡುಗಡೆ