ಕೊಪ್ಪಳ : ಲವ್ ಜಿಹಾದ್ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಆರೋಪಿಗೆ ಅಂತರಾಜ್ಯದವರ ಜೊತೆ ಲಿಂಕ್ ಇರುವುದು ಗೊತ್ತಾಗಿದ್ದು, ಆರ್ಥಿಕ ಸಹಾಯ ಪಡೆದಿದ್ದ ಎಂದು ಬೆಳಕಿಗೆ ಬಂದಿದೆ. ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಲಿಂಕ್ ಇದ್ದು, ಗೋವಾ, ಮುಂಬೈನಿಂದ ಆರ್ಥಿಕ ಸಹಾಯ ದೊರೆತಿದೆ ಎನ್ನಲಾಗಿದೆ.
ಗೋವಾ ಹಾಗೂ ಮುಂಬೈನ ಇಬ್ಬರು ಮಟ್ಕಾ ಬುಕ್ಕಿಗಳ ಸಂಪರ್ಕವಿದೆ. ಕೊಪ್ಪಳದಲ್ಲಿ ಹೈಫೈ ಜೀವನ ನಡೆಸಲು ಅಂತರಾಜ್ಯಗಳ ಬುಕ್ಕಿಗಳಿಂದ ಆರ್ಥಿಕ ಸಹಾಯ ದೊರೆತಿದೆ. ಇದೇ ಹಣದಿಂದಲೇ ಮುಸ್ತಫಾ ಹುಡುಗಿಯರ ಜೊತೆ ಎಂಜಾಯ್ ಮಾಡುತ್ತಿದ್ದ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಮುಸ್ತಫಾ ಖಾದ್ರಿ ಮೊಬೈಲ್‌ನಲ್ಲಿ 9,700 ವಿಡಿಯೋಗಳು, 7,000 ಫೋಟೋಗಳು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ವಿಡಿಯೋಗಳನ್ನು ಮುಸ್ತಫಾ ಬೇರೆಯವರಿಗೆ ರವಾನಿಸಿರೋ ಸಾಧ್ಯತೆ ಇದ್ದು, ಹೀಗಾಗಿ ಮುಸ್ತಫಾ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ.
ಈಗಾಗಲೇ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೂಡ ದೂರು ದಾಖಲಾಗಿದೆ. ಕೊಪ್ಪಳ ನಗರ ಠಾಣೆಗೆ ಅಗಮಿಸಿ ಮುಸ್ತಫಾನನ್ನ ಪ್ರೀತಿಸುತ್ತಿದ್ದ ಯುವತಿಯಿಂದ ಮೊಬೈಲ್ ಕಸಿದುಕೊಂಡ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಮೆಡಿಕಲ್ ಕಾಲೇಜ್ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ 8-10 ಜನ ಅಪರಿಚಿತ ಹುಡುಗರು ಮುಸ್ತಫಾಗೆ ಜೀವ ಬೆದರಿಕೆ ಹಾಕಿ ಅತನ ಬಳಿ ಇದ್ದ ಎರಡು ಮೊಬೈಲ್ ನೋಡಿ ಕೊಡುತ್ತೇನೆಂದು ಪಡೆದುಕೊಂಡು ವಾಪಸ್ ಕೊಟ್ಟಿಲ್ಲಾ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಲವ್ ಜಿಹಾದ್ ಪ್ರಕರಣ ಎಲ್ಲ ಕಡೆ ಸದ್ದು ಮಾಡ್ತಿದೆ. ಸದ್ಯ ಕೊಪ್ಪಳದಲ್ಲಿ ಕೂಡಾ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.















