ಚೆನ್ನೈ : ತಮಿಳುನಾಡು ಸಿಎಂ ಆಗಿ ತಮಿಳಗ ವೆಟ್ರಿ ಕಳಗಂ ಸ್ಥಾಪಕ ಮತ್ತು ಅಧ್ಯಕ್ಷ ಸಿ. ಜೋಸೇಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆಯೂ ನಡೆದಿದೆ. ಚುನಾವಣಾ ಫಲಿತಾಂಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಡಿಎಂಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಮೇ 7ರಂದು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆ.ಎನ್. ನೆಹರು ಅವರನ್ನು ಪ್ರತಿಪಕ್ಷ ಉಪ ನಾಯಕ ಮತ್ತು ಇ.ವಿ. ವೇಲು ಅವರನ್ನು ಪಕ್ಷದ ವಿಪ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಡಿಎಂಕೆ ತಿಳಿಸಿದೆ.
ಕೊಲತ್ತೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋತಿರುವ ಹಿನ್ನೆಲೆ, ತಂದೆಯ ಸ್ಥಾನವನ್ನು ಉದಯನಿಧಿ ತುಂಬಲಿದ್ದಾರೆ. ಡಿಎಂಕೆ ಯುವ ಘಟಕದ ನಾಯಕನಾಗಿ ನೇಮಕವಾದ ನಂತರ ಉದಯನಿಧಿ ಸ್ಟಾಲಿನ್ ಪಕ್ಷದಲ್ಲಿ ವೇಗವಾಗಿ ಪ್ರಭಾವ ಹೆಚ್ಚಿಸಿಕೊಂಡಿದ್ದರು. 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಚಿವರಾಗಿ, ನಂತರ ಉಪ ಮುಖ್ಯಮಂತ್ರಿಯಾಗಿ ಪದೋನ್ನತಿ ಪಡೆದದಿದ್ದರು.
ತಂದೆಯ ನಂತರ ಪಕ್ಷದ ಪ್ರಮುಖ ಶಕ್ತಿಕೇಂದ್ರವಾಗಿ ಹೊರಹೊಮ್ಮಿದ್ದ ಅವರಿಗೀಗ ಪ್ರತಿಪಕ್ಷ ನಾಯಕನ ಸ್ಥಾನವೂ ಸಿಕ್ಕಿದೆ. ಚೆಪಾಕ್-ತಿರುವಲ್ಲಿಕೆಣಿ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದಿರುವ ಉದಯನಿಧಿ ಈಗ ವಿಧಾನಸಭೆಯಲ್ಲಿ ಡಿಎಂಕೆಯ ಪರ ಹೋರಾಟವನ್ನು ಮುನ್ನಡೆಸಬೇಕಾಗಿದೆ. ವಿಶೇಷವಾಗಿ ಹೊಸ ಸರ್ಕಾರವು ಹಿಂದಿನ ಆಡಳಿತದ ವಿರುದ್ಧ ವಿವಿಧ ಆಡಳಿತಾತ್ಮಕ ವೈಫಲ್ಯಗಳ ಹೊಣೆಗಾರಿಕೆಯನ್ನು ಬೊಟ್ಟು ಮಾಡಲು ಯತ್ನಿಸುವ ಸಂದರ್ಭದಲ್ಲೂ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸವಾಲು ಎದುರಾಗಿದೆ.
















