ಬೆಂಗಳೂರು: ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ಬಳಿಕ, 2019ರಲ್ಲಿ ತಜ್ಞರ ಸಮಿತಿ ನೀಡಿದ್ದ ಎಚ್ಚರಿಕೆ ವರದಿ ಮತ್ತೆ ಚರ್ಚೆಗೆ ಬಂದಿದೆ. ಕರ್ನಾಟಕ ಹೈಕೋರ್ಟ್ ಸೂಚನೆಯ ಮೇರೆಗೆ ರಚಿಸಲಾದ ಸಮಿತಿಯು, ದುಬಾರೆ ಸೇರಿ ರಾಜ್ಯದ ಹಲವು ಆನೆ ಶಿಬಿರಗಳಲ್ಲಿ ಪ್ರವಾಸಿಗರ ಅತಿಯಾದ ಪ್ರವೇಶ ಮತ್ತು ಆನೆಗಳೊಂದಿಗೆ ಹೆಚ್ಚುತ್ತಿರುವ ನೇರ ಸಂಪರ್ಕದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಆಗಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಸಮಿತಿಯ ವರದಿಯಲ್ಲಿ ದುಬಾರೆ ಹಾಗೂ ಸಾಕ್ರೆಬೈಲು ಆನೆ ಶಿಬಿರಗಳಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ಆನೆಗಳ ವರ್ತನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ಪ್ರವಾಸಿಗರು ಆನೆಗಳಿಗೆ ಅತಿಯಾಗಿ ಹತ್ತಿರ ಹೋಗುತ್ತಿರುವುದು ಮಾನವ ಜೀವಕ್ಕೂ ಹಾಗೂ ಪ್ರಾಣಿಗಳ ಸುರಕ್ಷತೆಗೊ ಅಪಾಯಕಾರಿಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು.
ಆನೆಗಳು ಮತ್ತು ಪ್ರವಾಸಿಗರ ನಡುವೆ ನಿರ್ದಿಷ್ಟ ಅಂತರ ಕಾಪಾಡಬೇಕು. ಶಿಬಿರಗಳಲ್ಲಿ ನಿಯಂತ್ರಿತ ಪ್ರವಾಸೋದ್ಯಮ ವ್ಯವಸ್ಥೆ ಜಾರಿಯಾಗಬೇಕು. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ಶಿಫಾರಸು ಮಾಡಲಾಗಿತ್ತು. ಆದರೆ, ಈ ಶಿಫಾರಸುಗಳು ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂಬ ಆರೋಪ ಈಗ ಕೇಳಿಬರುತ್ತಿದೆ.
ಮೇ 18ರಂದು ದುಬಾರೆ ಆನೆ ಶಿಬಿರದಲ್ಲಿ ಎರಡು ಆನೆಗಳ ನಡುವಿನ ಘರ್ಷಣೆಯ ವೇಳೆ ತಮಿಳುನಾಡಿನಿಂದ ಬಂದಿದ್ದ ಪ್ರವಾಸಿಗರೊಬ್ಬರು ಸಾವನ್ನಪ್ಪಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ದುರ್ಘಟನೆ ಬಳಿಕ, ತಜ್ಞರ ಸಮಿತಿ ನೀಡಿದ್ದ ಹಿಂದಿನ ಎಚ್ಚರಿಕೆ ವರದಿ ಮತ್ತೆ ಸಾರ್ವಜನಿಕ ಗಮನ ಸೆಳೆಯುತ್ತಿದೆ.
ಸಮಿತಿಯ ಸದಸ್ಯರ ಪ್ರಕಾರ, ವರದಿಯಲ್ಲಿ ನೀಡಲಾಗಿದ್ದ ಸುರಕ್ಷತಾ ಶಿಫಾರಸುಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ಇಂತಹ ದುರ್ಘಟನೆ ತಪ್ಪಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಆನೆ ಶಿಬಿರಗಳಲ್ಲಿ ಪ್ರವಾಸಿಗರ ನಿಯಂತ್ರಣ, ಭದ್ರತಾ ವಲಯ ನಿರ್ಮಾಣ ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ ಎಂಬುದನ್ನೂ ಸಮಿತಿ ತಿಳಿಸಿತ್ತು.
ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆ ಈ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ರಾಜ್ಯದ ವಿವಿಧ ಆನೆ ಶಿಬಿರಗಳ ಪರಿಸ್ಥಿತಿ, ಆನೆಗಳ ಆರೋಗ್ಯ, ನಿರ್ವಹಣೆ, ಮೂಲಸೌಕರ್ಯ ಮತ್ತು ಪ್ರಾಣಿ ಕಲ್ಯಾಣ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವ ಜವಾಬ್ದಾರಿ ಸಮಿತಿಗೆ ನೀಡಲಾಗಿತ್ತು.
ಮೂರು ಸದಸ್ಯರ ಸಮಿತಿಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಕೆ.ಎಂ. ಚಿನ್ನಪ್ಪ, ತಮಿಳುನಾಡಿನ ಪಶುವೈದ್ಯ ಡಾ. ಕಲೈವಾನನ್ ಹಾಗೂ ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾದ ಹಿರಿಯ ಪಶುವೈದ್ಯ ಡಾ. ಎನ್ವಿಕೆ ಅಶ್ರಫ್ ಸದಸ್ಯರಾಗಿದ್ದರು.
ಸಮಿತಿಯು ಮತ್ತಿಗೋಡು, ಕಾವೇರಿ, ದುಬಾರೆ, ಬಳ್ಳೆ, ರಾಂಪುರ ಮತ್ತು ಸಾಕ್ರೆಬೈಲು ಸೇರಿ ಆರು ಆನೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಶಿಬಿರಗಳಲ್ಲಿನ ನೀರಿನ ಸೌಲಭ್ಯ, ವಾಸಸ್ಥಳ, ಆನೆಗಳ ಆರೋಗ್ಯ, ನಿರ್ವಹಣೆ ಮತ್ತು ಮೂಲಸೌಕರ್ಯಗಳ ಬಗ್ಗೆ ಮೌಲ್ಯಮಾಪನ ಮಾಡಲಾಗಿತ್ತು.
ಐದು ಅಂಕಗಳ ಮಾನದಂಡದಲ್ಲಿ ಯಾವುದೇ ಶಿಬಿರವೂ ಉತ್ತಮ ಶ್ರೇಣಿ ಪಡೆಯಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ದುಬಾರೆ ಶಿಬಿರಕ್ಕೆ 3.5 ಅಂಕ ದೊರೆತಿದ್ದರೂ, ಮೂಲಸೌಕರ್ಯ ಮತ್ತು ನಿರ್ವಹಣಾ ವಿಭಾಗದಲ್ಲಿ ಕೇವಲ 2.5 ಅಂಕ ಮಾತ್ರ ಲಭಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಈ ವರದಿ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಲಭ್ಯವಾಗಿರಲಿಲ್ಲ. ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರದಿರುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದುಬಾರೆ ದುರಂತ ಕುರಿತು ಮಾತನಾಡಿದ ಅವರು, ಇದು ದುರ್ಘಟನೆ ಆಗಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ. ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸಲು ವಿಶೇಷ ತಂಡವನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

















