ಮನೆ ಸುದ್ದಿ ಜಾಲ ರಶ್ಮಿಕಾ-ಕೃತಿ ನಡುವೆ ಕಿರಿಕ್ ಚರ್ಚೆ; ‘ಕಾಕ್ಟೇಲ್ 2’ ಪ್ರಚಾರಕ್ಕೆ ಹೊಸ ತಂತ್ರವೇ?

ರಶ್ಮಿಕಾ-ಕೃತಿ ನಡುವೆ ಕಿರಿಕ್ ಚರ್ಚೆ; ‘ಕಾಕ್ಟೇಲ್ 2’ ಪ್ರಚಾರಕ್ಕೆ ಹೊಸ ತಂತ್ರವೇ?

0

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ನಟಿಯರಾದ ರಶ್ಮಿಕಾ ಮಂದಣ್ಣ  ಹಾಗೂ ಕೃತಿ ಸನೋನ್ ನಡುವಿನ ಮಾತಿನ ಚಕಮಕಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ನಡೆದ ಹಾಡು ಬಿಡುಗಡೆ ಸಮಾರಂಭದಲ್ಲಿ ಇಬ್ಬರು ನಟಿಯರು ಪರಸ್ಪರ ಟಾಂಗ್ ನೀಡಿದ ಘಟನೆ ಅಭಿಮಾನಿಗಳ ಗಮನ ಸೆಳೆದಿದೆ.

ವೇದಿಕೆಯಲ್ಲೇ ಆರಂಭವಾದ ಪೈಪೋಟಿ

ಚಿತ್ರ ನಿರ್ಮಾಣ ಸಂಸ್ಥೆ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಚಾರದಲ್ಲಿ ಕಾರ್ಯಕ್ರಮದ ವೇಳೆ ತಮಾಷೆಯ ಚರ್ಚೆ ಆರಂಭವಾಯಿತು. ಕೃತಿ ಸನೋನ್ ಮಾತನಾಡುತ್ತಾ, “ನಾನು ಈ ಸಂಸ್ಥೆಯೊಂದಿಗೆ ಈಗಾಗಲೇ ಏಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಆದ್ದರಿಂದ ಇದು ನನ್ನದೇ ಸಾಂಗ್ ಲಾಂಚ್” ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ, “ನನ್ನ ಹಾಡು ಅಧಿಕೃತವಾಗಿ ಬಿಡುಗಡೆ ಆಗುತ್ತಿದೆ. ನಿಮ್ಮ ಹಾಡು ಮನರಂಜನೆಗಾಗಿ ಮಾತ್ರ” ಎಂದು ನಗುತ್ತಾ ಟಾಂಗ್ ನೀಡಿದರು.

ಅಭಿಮಾನಿಗಳ ವೋಟ್ ಬಳಿಕ ರಶ್ಮಿಕಾ ಪ್ರತಿಕ್ರಿಯೆ

ಕಾರ್ಯಕ್ರಮದಲ್ಲಿ ಕೃತಿ ಅವರ ‘ಮಾಶೂಕಾ’ ಹಾಗೂ ರಶ್ಮಿಕಾ ಅವರ ‘ತುಜ್ಕೋ’ ಹಾಡುಗಳಲ್ಲಿ ಯಾವುದು ಮೊದಲು ಪ್ರಸಾರವಾಗಬೇಕು ಎಂದು ಅಭಿಮಾನಿಗಳ ಬಳಿ ಕೇಳಲಾಯಿತು. ಹೆಚ್ಚಿನ ಬೆಂಬಲ ಕೃತಿ ಅವರ ಹಾಡಿಗೆ ಸಿಕ್ಕಿತು. ಇದರಿಂದ ತಮಾಷೆಯಾಗಿ ಪ್ರತಿಕ್ರಿಯಿಸಿದ ರಶ್ಮಿಕಾ, “ಈ ವೋಟ್ ಪ್ರಕ್ರಿಯೆ ಸಂಪೂರ್ಣ ಫೇಕ್” ಎಂದು ಹೇಳಿ ಎಲ್ಲರನ್ನು ನಗಿಸಿದರು.

ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್

ನಂತರ ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರ ಟಾಂಗ್ ಮುಂದುವರಿದಿತು. ಕೃತಿ ಸನೋನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ಮಾಶೂಕಾಗೆ ಹಣ್ಣಾದ ಮಾವು ಇಷ್ಟ, ಹುಳಿ ದ್ರಾಕ್ಷಿ ಅಲ್ಲ” ಎಂದು ಬರೆದು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದರು. ಇದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಾಯಿತು.

ಚಿತ್ರರಂಗದ ವಲಯದಲ್ಲಿ, ಇದು ನಿಜವಾದ ಜಗಳವಲ್ಲ, ಬದಲಿಗೆ ಸಿನಿಮಾ ಪ್ರಚಾರಕ್ಕಾಗಿ ಮಾಡಲಾದ ಸ್ಮಾರ್ಟ್ ತಂತ್ರ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜೂನ್ 19 ರಂದು ಸಿನಿಮಾ ಬಿಡುಗಡೆಯಾಗಲಿದೆ.