ಮನೆ ಕಾನೂನು 30 ಬೈಕ್ ಕಳ್ಳರ ಬಂಧನ: 105 ಬೈಕ್ ವಶಕ್ಕೆ ಪಡೆದ ಕಲಬುರಗಿ ಪೊಲೀಸರು

30 ಬೈಕ್ ಕಳ್ಳರ ಬಂಧನ: 105 ಬೈಕ್ ವಶಕ್ಕೆ ಪಡೆದ ಕಲಬುರಗಿ ಪೊಲೀಸರು

0

ಕಲಬುರಗಿ:  ನಗರದ ವಿವಿಧೆಡೆ ಬೈಕ್‌ ಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಬೈಕ್ ಕಳ್ಳರನ್ನು  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ₹ 54.55 ಲಕ್ಷ ಮೌಲ್ಯದ 105 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.‌

Join Our Whatsapp Group

ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯ ಸಿಬ್ಬಂದಿಯು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 28 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಬರ್ಬನ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದ್ದು, 28 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಶೋಕ ನಗರ ಠಾಣೆಯ ಪ್ರದೇಶದಲ್ಲಿ 20 ಬೈಕ್‌ಗಳನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರ್‌ಜಿ ನಗರ ಠಾಣೆ ವ್ಯಾಪ್ತಿಯ 8 ಬೈಕ್‌ಗಳನ್ನು ಜಪ್ತಿ ಮಾಡಿ ಐವರು ಆರೋಪಗಳನ್ನು ಬಂಧಿಸಲಾಗಿದೆ. ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 37 ಬೈಕ್ ಕಳ್ಳತನ ಪ್ರಕರಣಗಳಿಂದ ₹54.55 ಲಕ್ಷ ಮೌಲ್ಯದ 105 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬೈಕ್ ಕಳ್ಳತನದಲ್ಲಿ ಬಂಧಿತರಾದ 30 ಆರೋಪಿಗಳ ಪೈಕಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರೂ ಇದ್ದಾರೆ. ಬಹುತೇಕ ಆರೋಪಿಗಳು ದುಂದು ವೆಚ್ಚಕ್ಕಾಗಿಯೇ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಗ್ರಾಮೀಣ ಭಾಗದವರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.