ಮನೆ ಸುದ್ದಿ ಜಾಲ ರಸಗೊಬ್ಬರ ದಾಸ್ತಾನು ಮಾನ್ಸೂನ್​ ಬಿತ್ತನೆಗೆ ಸಾಕಷ್ಟಿದೆ ಎಂದ ಕೇಂದ್ರ ಸರ್ಕಾರ

ರಸಗೊಬ್ಬರ ದಾಸ್ತಾನು ಮಾನ್ಸೂನ್​ ಬಿತ್ತನೆಗೆ ಸಾಕಷ್ಟಿದೆ ಎಂದ ಕೇಂದ್ರ ಸರ್ಕಾರ

0

ನವದೆಹಲಿ: ದೇಶದಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟಿದ್ದು, ಮುಂಬರುವ ಖಾರಿಫ್ ಋತುವಿನಲ್ಲಿ ಸಮರ್ಪಕ ಪೂರೈಕೆ ಹೊಂದಿದೆ ಎಂದು ಕೇಂದ್ರ ಸರ್ಕಾರ ಇಂದು ಸ್ಪಷ್ಟಪಡಿಸಿದದ್ದು ಮಧ್ಯಪ್ರಾಚ್ಯದ ಇತ್ತೀಚಿನ ಬೆಳವಣಿಗೆಗಳ ಬೆನ್ನಲ್ಲೇ ಮಾತನಾಡಿರುವ ರಸಗೊಬ್ಬರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಪರ್ಣಾ ಎಸ್.ಶರ್ಮಾ ಅವರು, ಪ್ರಮುಖ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಬೆಲೆ ಸ್ಥಿರವಾಗಿದೆ. ದೇಶದಲ್ಲಿ ರಸಗೊಬ್ಬರದ ಭದ್ರತೆ ಸಾಕಷ್ಟಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಅವಶ್ಯಕತೆಗೆ ಅನುಗುಣವಾದ ಪೂರೈಕೆ ಇದ್ದು, ಕೊರತೆ ಇಲ್ಲ ಎಂದರು. ರಸಗೊಬ್ಬರ ಇಲಾಖೆಯ ಪರವಾಗಿ ಕೃಷಿ ಇಲಾಖೆಯಿಂದ ನಿರ್ಣಯಿಸಲಾದ ರಸಗೊಬ್ಬರದ ಅಗತ್ಯತೆಯ ಆಧಾರದ ಮೇಲೆ 2026ರ ಮಾನ್ಸೂನ್​ ಋತುವಿನ ದಾಸ್ತಾನಿಗಿಂತ ಶೇ.51ಕ್ಕಿಂತ ಹೆಚ್ಚಾಗಿದೆ. ಕೃಷಿ ಇಲಾಖೆ ರಸಗೊಬ್ಬರದ ಮೌಲ್ಯಮಾಪನ ನಡೆಸಿದ್ದು, ಖಾರಿಫ್​ಗೆ 390.54 ಲಕ್ಷ ಟನ್​ ಗೊಬ್ಬರ ಬೇಕಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಸಗೊಬ್ಬರ ದಾಸ್ತಾನು ಉತ್ತಮವಾಗಿದ್ದು, ಎಂಆರ್​ಪಿ ರಸಗೊಬ್ಬರ ಕೂಡ ಅದೇ ರೀತಿ ಉತ್ತಮವಾಗಿದೆ ಎಂದು ಹೇಳಿದರು. ಬಿಕ್ಕಟ್ಟಿನ ಅವಧಿಯ ಬಳಿಕ ದೇಶೀಯ ಉತ್ಪಾದನೆಯು 76.78 ಲಕ್ಷ ಟನ್​ ಆಗಿದ್ದು, ಆಮದು ರಸಗೊಬ್ಬರ ಪ್ರಮಾಣ 19.94 ಲಕ್ಷ ಟನ್​ ಆಗಿದೆ. ಒಟ್ಟಾರೆ, ಬಿಕ್ಕಟ್ಟಿನ ಪರಿಸ್ಥಿತಿಯ ಬಳಿಕ 97 ಲಕ್ಷ ಮೆಟ್ರಿಕ್​ ಟನ್​ ರಸಗೊಬ್ಬರ ಲಭ್ಯವಿದೆ ಎಂದು ವಿವರಣೆ ನೀಡಿದರು. ಭಾರತ ಜಾಗತಿಕ ಮೂಲಗಳಿಂದ 7 ಲಕ್ಷ ಟನ್ ಎನ್​ಪಿಕೆ ಪಡೆದುಕೊಂಡಿದೆ. ದೇಶಕ್ಕೆ ಇನ್ನೂ 12 ಲಕ್ಷ ಟನ್ ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ಮತ್ತು 4 ಲಕ್ಷ ಟನ್ ಟ್ರಿಪಲ್ ಸೂಪರ್ ಫಾಸ್ಫೇಟ್ ಮತ್ತು 3 ಲಕ್ಷ ಟನ್ ಅಮೋನಿಯಂ ಸಲ್ಫೇಟ್ ಅನ್ನು ಸುರಕ್ಷಿತವಾಗಿಡಲಾಗಿದೆ. ಇದು ಸುಮಾರು 15-20 ದಿನಗಳಲ್ಲಿ ಪ್ರಾರಂಭವಾಗುವ ಋತುವಿಗೆ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಲಾಗಿದೆ. ಕಾರ್ಯದರ್ಶಿಗಳ ಸಬಲೀಕರಣ ಗುಂಪು ಕೂಡ ವಾರದ ಆಧಾರದ ಮೇಲೆ ಪರಿಸ್ಥಿತಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದರು. ಕಳೆದ ವಾರ ರಸಗೊಬ್ಬರ ಸಚಿವಾಲಯವು, ಮಾರ್ಚ್​-ಏಪ್ರಿಲ್​ನಲ್ಲಿ ದೇಶೀಯ ಉತ್ಪಾದನೆ 67.76 ಲಕ್ಷ ಟನ್​ ಆಗಿದ್ದು, ಇದರಲ್ಲಿ 40.72 ಯೂರಿಯಾ, ಡೈ ಅಮೋನಿಯಂ ಫಾಸ್ಫೇಟ್​ 5.39 ಲಕ್ಷ ಟನ್​, ಎನ್​ಪಿಕೆ 13.65 ಲಕ್ಷ ಟನ್​ ಹಾಗೂ ಎಸ್​ಎಸ್​ಪಿ 8 ಲಕ್ಷ ಟನ್​ ಆಗಿದೆ ಎಂದು ತಿಳಿಸಿತ್ತು ಎನ್ನಲಾಗಿದೆ.