ಮನೆ ಸುದ್ದಿ ಜಾಲ ‘ಮಹಾನ್’ : ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ಬರಲಿದೆ ಹೊಸ ಚಿತ್ರ

‘ಮಹಾನ್’ : ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ಬರಲಿದೆ ಹೊಸ ಚಿತ್ರ

0

‘ಮಹಾನ್’. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್​ಡಮ್​ ಹೊಂದಿರುವ ವಿಜಯ್ ರಾಘವೇಂದ್ರ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಒಂದಾದ ಬಳಿಕ ಒಂದರಂತೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುತ್ತಿರುವ ಚಿನ್ನಾರಿ ಮುತ್ತ ಇತ್ತೀಚೆಗೆ ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಚಿತ್ರ ಮತ್ತು ರಾಕ್ಷಸ ವೆಬ್​ ಸರಣಿಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಪ್ರಸ್ತುತ ‘ರುದ್ರಾಭಿಷೇಕಂ’, ‘ಮಹಾನ್’ ಸೇರಿ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ‘ಮಹಾನ್’ ಚಿತ್ರತಂಡಕ್ಕೆ ಕಿರಣ್ ಶ್ರೀನಿವಾಸ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಪಿ.ಸಿ. ಶೇಖರ್ ಆ್ಯಕ್ಷನ್​ ಕಟ್ ಹೇಳಿರುತ್ತಿರುವ ಈ ಮಹಾನ್ ಚಿತ್ರದಲ್ಲಿ ವಿಜಯ್ ರಾಘವೇಂದ್ರ ರೈತನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ರೈತರ ಕುರಿತಾದ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿರಣ್ ಶ್ರೀನಿವಾಸ್ ಅಭಿನಯಿಸುತ್ತಿದ್ದು, ಖುಷಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಟ ಕಿರಣ್ ಶ್ರೀನಿವಾಸ್ ಮಾತನಾಡಿ, ”ನಿರ್ದೇಶಕ ಪಿ‌.ಸಿ. ಶೇಖರ್ ನಿರ್ದೇಶನದ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿದ್ದವು. ಇದೀಗ ಅವರ ನಿರ್ದೇಶನದ ಮಹಾನ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ. ನಾನು ಈವರೆಗೂ ಮಾಡಿರದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಈ ಪಾತ್ರ ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರವಾಗುತ್ತದೆ ಎಂಬ ಭರವಸೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿರ್ದೇಶಕರು ಕಥೆ ಹೇಳಿದಾಗಲೇ ನನ್ನ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು. ಇನ್ನೂ, ಕೆಲ ವರ್ಷಗಳ ಹಿಂದೆ ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋನಲ್ಲಿ ನಾನು ನಿರೂಪಕನಾಗಿದ್ದೆ. ಆಗವರು ತೋರಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ಈಗ ಅವರ ಜೊತೆಗೆ ನಟಿಸಿರುವುದು ಬಹಳ ಖುಷಿಯಾಗಿದೆ.

ಹಾಗೂ ರಂಗಾಯಣ ರಘು ಅವರಿಂದ ಅಭಿನಯದ ಬಗ್ಗೆ ಸಾಕಷ್ಟು ಕಲಿತುಕೊಂಡಿದ್ದೇನೆ. ರಾಧಿಕಾ ನಾರಾಯಣ್ ಹಾಗೂ ವರ್ಷ ಬೊಳಮ್ಮ ಅವರ ಜೊತೆಗೆ ಅಭಿನಯಿಸಿದ್ದು ಹಾಗೂ ಪ್ರಕಾಶ್ ಬುದ್ದೂರು ಅವರ ನಿರ್ಮಾಣದಲ್ಲಿ ನಟಿಸುತ್ತಿರುವುದು ಸಂತೋಷವಾಗಿದೆ ಎಂದು ಖುಷಿ ಹಂಚಿಕೊಂಡರು. ಈ ಚಿತ್ರದಲ್ಲಿ ಮಹಾನ್ ಎಂದರೆ ರೈತ. ದೇಶದ ಬೆನ್ನೆಲುಬಾದ ರೈತನ ಕುರಿತಾದ ಚಿತ್ರದಲ್ಲಿ ನಾನೂ ಒಂದು ಭಾಗವಾಗಿರುವುಕ್ಕೆ ಹೆಮ್ಮೆ ಇದೆ ಎಂದು ನಟ ಕಿರಣ್ ಶ್ರೀನಿವಾಸ್ ತಿಳಿಸಿದರು. ಈ ಬಹುನಿರೀಕ್ಷಿತ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆ ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಸೇರಿ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಾಣ‌ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.