ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪೋಲೆಂಡ್ಗೆ ಹೆಚ್ಚುವರಿಯಾಗಿ 5,000 ಸೈನಿಕರನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರವು ಪೆಂಟಗನ್ನ ಇತ್ತೀಚಿನ ನಿರ್ಧಾರಕ್ಕಿಂತ ವ್ಯತಿರಿಕ್ತವಾಗಿದೆ. ಇತ್ತೀಚಿಗಷ್ಟೇ ಟ್ರಂಪ್ ಜರ್ಮನಿಯಿಂದ 5000 ಸೈನಿಕರನ್ನು ವಾಪಸ್ ಪಡೆದಿದ್ದರು. ಈ ನಿರ್ಧಾರ NATO ಮಿತ್ರರಲ್ಲಿ ಗೊಂದಲ ಸೃಷ್ಟಿಸಿದೆ. ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಪೋಲೆಂಡ್ನ ಅಧ್ಯಕ್ಷ ಕರೋಲ್ ನವ್ರೋಕಿ ಅವರ ಯಶಸ್ವಿ ಚುನಾವಣೆ ಮತ್ತು ಅವರೊಂದಿಗಿನ ನಮ್ಮ ಸಂಬಂಧದ ಆಧಾರದ ಮೇಲೆ, ಅಮೆರಿಕ ಪೋಲೆಂಡ್ಗೆ ಹೆಚ್ಚುವರಿಯಾಗಿ 5 ಸಾವಿರ ಸೈನಿಕರನ್ನು ಕಳುಹಿಸುವುದಾಗಿ ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಡೊನಾಲ್ಡ್ ಟ್ರಂಪ್ ಅವರು ತಮ್ಮ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿ ಕರೋಲ್ ನವ್ರೋಕಿ ಅವರನ್ನು ಉಲ್ಲೇಖಿಸಿದ್ದಾರೆ. ನವ್ರೋಕಿ 2025ರ ಜೂನ್ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಆಗಸ್ಟ್ನಲ್ಲಿ ಪೋಲೆಂಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಕನ್ಸರ್ವೇಟಿವ್/ನ್ಯಾಷನಲಿಸ್ಟ್ ನಾಯಕರಾಗಿದ್ದು, ಟ್ರಂಪ್ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿದ್ದರು. ಈ ಘೋಷಣೆಯು ಕೆಲವು ದಿನಗಳ ಹಿಂದೆಯೇ ಪೆಂಟಗನ್ ಯುರೋಪ್ನಲ್ಲಿ ಬ್ರಿಡ್ಜ್ ಕಂಬ್ಯಾಟ್ ಟೀಂ BCTs ಸಂಖ್ಯೆಯನ್ನು 4 ರಿಂದ 3ಕ್ಕೆ ಇಳಿಸುವುದಾಗಿ ಘೋಷಿಸಿದ್ದ ನಿರ್ಧಾರಕ್ಕೆ ಇದು ವ್ಯತಿರಿಕ್ತವಾದ ತೀರ್ಮಾನವಾಗಿದೆ. ಇದರಲ್ಲಿ ಪೋಲೆಂಡ್ಗೆ ಯೋಜಿತ ಸುಮಾರು 4ಸಾವಿರ ಸೈನಿಕರ ನಿಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಇದು ಯುರೋಪಿಯನ್ ಮಿತ್ರರಲ್ಲಿ ಆಘಾತ ಮತ್ತು ಆಶ್ಚರ್ಯಕ್ಕೆ ಕಾರಣವಾಗಿತ್ತು. ಪೋಲೆಂಡ್ ಈಗಾಗಲೇ ತನ್ನ GDPಯ ಶೇ 4ಕ್ಕಿಂತ ಹೆಚ್ಚು ರಕ್ಷಣಾ ವೆಚ್ಚಕ್ಕೆ ಬಳಸುತ್ತಿದೆ. ಈ ಮೂಲಕ ಅದು ಮಾದರಿ ಮಿತ್ರ ದೇಶವಾಗಿ ಗುರುತಿಸಿಕೊಂಡಿದೆ.
ಟ್ರಂಪ್ ಆಡಳಿತವು NATO ದೇಶಗಳು ಹೆಚ್ಚು ರಕ್ಷಣಾ ಖರ್ಚು ಮಾಡಬೇಕು ಎಂಬುದಾಗಿ ಬಯಸುತ್ತಿದೆ ಮತ್ತು ಅಮೆರಿಕ ಬೆಂಬಲ ನೀಡುವ ದೇಶಗಳಿಗೆ ಆದ್ಯತೆ ನೀಡುವ ಅಮೆರಿಕ ಮೊದಲು ಎಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಈ ಹೊಸ ಘೋಷಣೆಯು ನಿವ್ವಳ ಹೆಚ್ಚಳವೇ ಅಥವಾ ಜರ್ಮನಿ ಸೇರಿದಂತೆ ಇತರೆಡೆಯಿಂದ ಸೈನಿಕರನ್ನು ಮರು-ವಿತರಣೆ ಮಾಡುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೆಂಟಗನ್ ಮತ್ತು NATO ಅಧಿಕಾರಿಗಳು ಈ ಘೋಷಣೆಯಿಂದ ಆಶ್ಚರ್ಯಗೊಂಡಿದ್ದಾರೆ ಇದು ಯುರೋಪ್ನಲ್ಲಿ ಅಮೆರಿಕ ಪಡೆಗಳ ಒಟ್ಟಾರೆ ಕಡಿತದ ಹಿನ್ನೆಲೆಯಲ್ಲಿ ಬಂದ ಗಮನಾರ್ಹ ತಿರುವು ಎಂದು ನೋಡಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.

















