2025ರಲ್ಲಿ ಭಾರೀ ಸದ್ದು ಮಾಡಿದ್ದ ಕನ್ನಡದ ‘ಸು ಫ್ರಮ್ ಸೋ’ ಸಿನಿಮಾ ಇದೀಗ ಮರಾಠಿ ಭಾಷೆಗೆ ರಿಮೇಕ್ ಆಗಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿ ದೊಡ್ಡ ಯಶಸ್ಸು ದಾಖಲಿಸಿತ್ತು. ಈಗ ಅದೇ ಚಿತ್ರ ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂಬ ಹೆಸರಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಮೂಲ ಕನ್ನಡ ಸಿನಿಮಾಗೆ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂದು ಟೈಟಲ್ ಇಡಲಾಗಿತ್ತು. ಬಳಿಕ ಟೈಟಲ್ ಉದ್ದವಾಗಿದೆ ಎನ್ನುವ ಕಾರಣದಿಂದ ‘ಸು ಫ್ರಮ್ ಸೋ’ ಎಂದು ಹೆಸರು ಬದಲಾಯಿಸಲಾಗಿತ್ತು. ಮರಾಠಿ ರಿಮೇಕ್‌ಗೆ ‘ತುಂಬಾಡ್ಚಿ ಮಂಜುಳಾ’ ಎಂಬ ಶೀರ್ಷಿಕೆ ಆಯ್ಕೆ ಮಾಡಲಾಗಿದೆ. ಈ ಟೈಟಲ್ ಹಿಂದಿ ಸೂಪರ್ ಹಿಟ್ ‘ತುಂಬಾಡ್’ ಸಿನಿಮಾವಿನ ಜೊತೆ ಕನೆಕ್ಷನ್ ಹೊಂದಿರುವುದರಿಂದ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ.
ಬಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ‘ತುಂಬಾಡ್’ ಸಿನಿಮಾ ವಿಭಿನ್ನ ಕಥಾಹಂದರ ಮತ್ತು ಥ್ರಿಲ್ಲರ್ ಶೈಲಿಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತುಂಬಾಡ್ ಗ್ರಾಮವನ್ನು ಆಧಾರವಾಗಿಟ್ಟುಕೊಂಡು ಆ ಸಿನಿಮಾದ ಕಥೆ ಮೂಡಿ ಬಂದಿತ್ತು. ಇದೇ ಹಿನ್ನೆಲೆ ಕಾರಣದಿಂದ ಮರಾಠಿ ಚಿತ್ರಕ್ಕೆ ‘ತುಂಬಾಡ್ಚಿ ಮಂಜುಳಾ’ ಎಂಬ ಹೆಸರು ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಮರಾಠಿ ರಿಮೇಕ್ ಟ್ರೇಲರ್ ನೋಡಿದರೆ ‘ಸು ಫ್ರಮ್ ಸೋ’ ಚಿತ್ರದ ಶೈಲಿಯೇ ಮುಂದುವರಿದಿರುವುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಹಿನ್ನೆಲೆ, ಹಳ್ಳಿ ಸೊಗಡು, ಕಾಮಿಡಿ ಅಂಶಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಕನ್ನಡ ಟ್ರೇಲರ್‌ನಲ್ಲಿ ಕಾಣಿಸದಿದ್ದ ಗುರೂಜಿ ಪಾತ್ರವನ್ನು ಮರಾಠಿ ಟ್ರೇಲರ್‌ನಲ್ಲಿ ಪರಿಚಯಿಸಲಾಗಿದೆ.‘ತುಂಬಾಡ್ಚಿ ಮಂಜುಳಾ’ ಸಿನಿಮಾದಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್ ಹಾಗೂ ಮಾರ್ಕಂಡ್ ಅನಸ್ಪುರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವಿಧ್ ಕೊರಗಾಂವ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.


















