ತಮಿಳುನಾಡು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ಮುರುಗನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಎಲ್ಲಾ ಮಾದರಿಯ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2018ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಮುರುಗನ್ ಅಶ್ವಿನ್, ಇದೀಗ ತಮ್ಮ ವೃತ್ತಿಪರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಆದರೆ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರವಾಗುವುದಿಲ್ಲ ಎಂದು ತಿಳಿಸಿರುವ ಅವರು, ಮುಂದಿನ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡಲು ಸಜ್ಜಾಗಿದ್ದಾರೆ.
ತಮಿಳುನಾಡು ಮೂಲದ 35 ವರ್ಷದ ಕ್ರಿಕೆಟಿಗ ಮುರುಗನ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀರ್ಘ ಸಂದೇಶ ಹಂಚಿಕೊಳ್ಳುವ ಮೂಲಕ 10 ವರ್ಷಗಳ ವೃತ್ತಿಪರ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿರುವುದಾಗಿ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ಗೆ ನಿವೃತ್ತಿ ಹೇಳಿದ್ದರೂ, ವಿದೇಶಿ ಲೀಗ್‌ಗಳಲ್ಲಿ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ವಿದೇಶಿ ಲೀಗ್‌ಗಳಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿರುವ ಮುರುಗನ್ ಅಶ್ವಿನ್, ನಿವೃತ್ತ ಆಟಗಾರರ ಲೀಗ್‌ಗಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ತಮ್ಮ ಕ್ರಿಕೆಟ್ ಪಯಣವನ್ನು ಹೊಸ ರೂಪದಲ್ಲಿ ಮುಂದುವರಿಸಲು ಯೋಜನೆ ರೂಪಿಸಿದ್ದಾರೆ.
ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿರುವ ಅಪರೂಪದ ಆಟಗಾರರಲ್ಲಿ ಮುರುಗನ್ ಅಶ್ವಿನ್ ಕೂಡ ಒಬ್ಬರು. ನಿವೃತ್ತಿ ಘೋಷಣೆಯ ವೇಳೆ ಈ ಮೂವರು ನಾಯಕರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
2018ರ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ಮುರುಗನ್ ಅಶ್ವಿನ್, ಆರ್ಸಿಬಿ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ಅವಧಿಯಲ್ಲಿ 3 ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಐಪಿಎಲ್‌ನಲ್ಲಿ ಒಟ್ಟು 44 ಪಂದ್ಯಗಳನ್ನು ಆಡಿರುವ ಮುರುಗನ್ ಅಶ್ವಿನ್, 35 ವಿಕೆಟ್ ಕಬಳಿಸಿದ್ದಾರೆ. 21 ರನ್ ನೀಡಿ 3 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡದ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು, ಬಳಿಕ ಚಂಡೀಗಢ್ ಹಾಗೂ ಜಮ್ಮು ಕಾಶ್ಮೀರ ತಂಡಗಳನ್ನೂ ಪ್ರತಿನಿಧಿಸಿದ್ದರು. ಒಟ್ಟು 117 ಟಿ20 ಪಂದ್ಯಗಳಲ್ಲಿ 115 ವಿಕೆಟ್ ಪಡೆದಿರುವ ಮುರುಗನ್, ಲಿಸ್ಟ್-ಎ ಕ್ರಿಕೆಟ್‌ನಲ್ಲಿ 34 ಪಂದ್ಯಗಳಿಂದ 35 ವಿಕೆಟ್ ಕಬಳಿಸಿದ್ದಾರೆ.
ಈಗ 35ನೇ ವಯಸ್ಸಿನಲ್ಲಿ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ಗೆ ಗುಡ್ ಬೈ ಹೇಳಿರುವ ಮುರುಗನ್ ಅಶ್ವಿನ್, ಮುಂದಿನ ದಿನಗಳಲ್ಲಿ ವಿದೇಶಿ ಟಿ20 ಲೀಗ್‌ಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ.


















