ವಿಜಯಪುರ : ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು. ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯ ಮೂಡಿದ್ದ ವೈಷ್ಯಮ್ಯ ಇಂದು ಸ್ಫೋಟಗೊಂಡಿದೆ.
ಜಮೀನಿನ ಕುರಿತು ತಕರಾರು ಇದೆಂದು ಹೇಳಿದ್ದರೂ ಅದೇ ಜಮೀನು ಖರೀದಿಸಿ ಉಳುಮೆಗೆ ಮುಂದಾಗಿದ್ದರಿಂದ ತಳವಾರ ಕುಟುಂಬದವರು ಕುಪಿತಗೊಂಡು ಅವರ ಕಡೆಯವರೇ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಂಧನವಾದ ಬಳಿಕಷ್ಟೆ ನಿಖರ ಮಾಹಿತಿ ದೊರೆಯಲಿದೆ. ಕೊಲೆಯಾದ ಘಟನಾ ಸ್ಥಳಕ್ಕೆ ಸೋಕೋ ತಂಡ, ಬೆರಳು ಮುದ್ರೆ ತಂಡ ಭೇಟಿ ನೀಡಿ, ಪರಿಶೀಲನೆ ಕೈಕೊಂಡಿದ್ಧಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್ ತಂಡಗಳು ಹಾಗೂ 4 ಕೆಎಸ್ಆರ್ಪಿ ತಂಡಗಳನ್ನು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ.

















