ಮನೆ ಸುದ್ದಿ ಜಾಲ ಸಂಸದ ಯದುವೀರ್ : ಮಡಿಕೇರಿ ಅರಮನೆಯ ಅಭಿವೃದ್ಧಿಗೆ ಪ್ರಯತ್ನ‌ ಯಶಸ್ವಿ

ಸಂಸದ ಯದುವೀರ್ : ಮಡಿಕೇರಿ ಅರಮನೆಯ ಅಭಿವೃದ್ಧಿಗೆ ಪ್ರಯತ್ನ‌ ಯಶಸ್ವಿ

0

ಮೈಸೂರು : ಕೊಡಗಿನ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿರಂತರ ಪ್ರಯತ್ನಗಳಿಗೆ ಮಹತ್ವದ ಫಲ ದೊರೆತಿದ್ದು, ಐತಿಹಾಸಿಕ ಮಡಿಕೇರಿ ಅರಮನೆಯ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಸಿಕ್ಕಿದೆ. ಸಂಸ್ಕೃತಿ ಸಚಿವಾಲಯಕ್ಕೆ, ಯದುವೀರ್ ಒಡೆಯರ್ ಅವರು ಸಲ್ಲಿಸಿದ್ದ ಮನವಿ ಹಾಗೂ ನಿರಂತರ ಅನುಸರಣೆಯ ಹಿನ್ನೆಲೆಯಲ್ಲಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಡಿಕೇರಿ ಅರಮನೆಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ತಮ್ಮ ಪತ್ರದಲ್ಲಿ ಸಚಿವರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಡಿಕೇರಿ ಅರಮನೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಕುರಿತ್ತಾಗಿ ಇದರ ಭಾಗವಾಗಿ, ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸುವ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ್ ಪ್ರದರ್ಶನಗಳನ್ನೊಳಗೊಂಡ ಆಧುನಿಕ ತಾಣ ವಸ್ತುಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಇದು ಕೊಡಗಿನ ಸಮೃದ್ಧ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಲಿದೆ. ಈ ಬೆಳವಣಿಗೆಗೆ ಕಾರಣವಾದುದು, 2025ರ ಮಾರ್ಚ್ 18ರಂದು ಸಂಸತ್ ಸದಸ್ಯರಾದ ಶ್ರೀ ಯದುವೀರ್ ಒಡೆಯರ್ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವಿವರವಾದ ಮನವಿ. ಆ ಮನವಿಯಲ್ಲಿ ಅವರು ಮಡಿಕೇರಿ ಅರಮನೆಗೆ ಸಂರಕ್ಷಿತ ಸ್ಮಾರಕ ಸ್ಥಾನಮಾನ ನೀಡುವುದು ಹಾಗೂ ಅಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸುವ ಕುರಿತು ಬಲವಾಗಿ ಆಗ್ರಹಿಸಿದ್ದರು. ಮಡಿಕೇರಿ ಅರಮನೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮನಗಂಡು, ಯದುವೀರ್ ಒಡೆಯರ್ ಅವರು ಈ ವಿಷಯವನ್ನು ಕೇಂದ್ರ ಸರ್ಕಾರ ಹಾಗೂ ಎಎಸ್‌ಐ ಅಧಿಕಾರಿಗಳೊಂದಿಗೆ ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದರು. ಅವರ ಪ್ರಯತ್ನಗಳ ಫಲವಾಗಿ, ಎಎಸ್‌ಐನ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತದ ಸಹಯೋಗದಲ್ಲಿ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಸಂಸತ್ ಸದಸ್ಯರು ನೀಡಿದ ಸಲಹೆಗಳನ್ನು ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಪರಿಗಣಿಸಲಾಗಿದೆ.

ಮಡಿಕೇರಿ ಅರಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಬಹುಕಾಲದ ಬೇಡಿಕೆ ಇದೀಗ ಸಾಕಾರಗೊಳ್ಳುವ ಹಂತ ತಲುಪಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕೊಡಗಿನ ವೈಭವಯುತ ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ಪರಂಪರೆ ಮತ್ತು ಪ್ರವಾಸೋದ್ಯಮ ತಾಣವಾಗಿ ಮಡಿಕೇರಿ ಅರಮನೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಭವಿಷ್ಯದ ಪೀಳಿಗೆಗಳಿಗೆ ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ಸೃಷ್ಟಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಬೆಳವಣಿಗೆ ಕರ್ನಾಟಕದ ಪ್ರಮುಖ ಐತಿಹಾಸಿಕ ಪರಂಪರೆ ತಾಣಗಳಲ್ಲಿ ಒಂದಾದ ಮಡಿಕೇರಿ ಅರಮನೆಯ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿದ್ದು, ಪ್ರದೇಶದ ಸಾಂಸ್ಕೃತಿಕ ಆಸ್ತಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗಮನ ಹಾಗೂ ಹೂಡಿಕೆ ತರಲು ಸಂಸದ ಯದುವೀರ್ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.