ಬೆಂಗಳೂರು: ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಾಜಿ ಕಾರ್ಯದರ್ಶಿಯೊಬ್ಬರು ಸಂಘಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಸಮೀಪದ ಕೊಲ್ಲಿಗನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಹಾಲಿ ಕಾರ್ಯದರ್ಶಿ ನೀಡಿರುವ ದೂರಿನ ಮೇರೆಗೆ, ಮಾಜಿ ಕಾರ್ಯದರ್ಶಿ ಎಸ್.ಸಿ. ಉಮೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ದೂರಿನ ಪ್ರಕಾರ, ಎಸ್.ಸಿ. ಉಮೇಶ್ ಅವರು 2011ರ ಏಪ್ರಿಲ್ 28ರಿಂದ 2026ರ ಫೆಬ್ರವರಿ 26ರವರೆಗೆ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಆಡಳಿತಾವಧಿಯಲ್ಲಿ ಹಣ ದುರ್ಬಳಕೆ ನಡೆದಿರುವುದು ಪತ್ತೆಯಾದ ಹಿನ್ನೆಲೆ, ಸಂಘದ ನಿರ್ದೇಶಕ ಮಂಡಳಿ ಮಾರ್ಚ್ 13ರಂದು ಅವರನ್ನು ಅಮಾನತುಗೊಳಿಸಿತ್ತು.
ಆದರೆ ಅಮಾನತು ಆದ ಬಳಿಕ ಸಂಘದ ಪ್ರಮುಖ ದಾಖಲೆಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ಉಪಕರಣಗಳನ್ನು ಹಸ್ತಾಂತರಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಘದ ವಾರ್ಷಿಕ ಲೆಕ್ಕಪರಿಶೋಧನೆ ನಡೆಸಲು ಹಾಗೂ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾಗಿದ್ದ ಎಂಟು ಪ್ರಮುಖ ದಾಖಲೆಗಳು ಮತ್ತು ದಾಖಲೆ ಪುಸ್ತಕಗಳು ಕಾಣೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಈ ದಾಖಲೆಗಳು ಲಭ್ಯವಿಲ್ಲದ ಕಾರಣ ಸಂಘದ ಆಡಳಿತ ಕಾರ್ಯಗಳಿಗೆ ಅಡಚಣೆ ಉಂಟಾಗಿದ್ದು, ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಾಧಾರಗಳಾಗಿದ್ದ ಕಾರಣದಿಂದಲೇ ಅವುಗಳನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.
ಅಮಾನತು ಬಳಿಕ ಸಂಘದ ಕಚೇರಿಗೆ ಬೀಗ ಹಾಕಲಾಗಿದ್ದ ಹಿನ್ನೆಲೆಯಲ್ಲಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಅನುಮತಿ ಪಡೆದು ಅಧಿಕಾರಿಗಳು ಬೀಗ ಒಡೆದು ಕಚೇರಿಯನ್ನು ತೆರೆದಿದ್ದಾರೆ. ಈ ವೇಳೆ ನಡೆಸಿದ ಪರಿಶೀಲನೆಯಲ್ಲಿ ಎಂಟು ಪ್ರಮುಖ ದಾಖಲೆಗಳು ಮತ್ತು ದಾಖಲೆ ಪುಸ್ತಕಗಳು ನಾಪತ್ತೆಯಾಗಿರುವುದು ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ರ ಸೆಕ್ಷನ್ 109(10) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಣ ದುರ್ಬಳಕೆ ಆರೋಪ ಹಾಗೂ ದಾಖಲೆಗಳ ನಾಪತ್ತೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಮಾನತುಗೊಂಡ ಮಾಜಿ ಕಾರ್ಯದರ್ಶಿಯ ಪಾತ್ರದ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
















