ಮೈಸೂರು, ಜೂನ್ 5: ಜೂಜಾಟ ದಂಧೆ ನಡೆಸುವುದು ಹಾಗೂ ರೌಡಿಸಂ ಚಟುವಟಿಕೆಗಳ ಮೂಲಕ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ವ್ಯಕ್ತಿಯನ್ನು ಮೈಸೂರು ಜಿಲ್ಲೆಯಿಂದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಗಡಿಪಾರು ಮಾಡಲಾಗಿದೆ.
ಈ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರು ಮೊಳೆ ಗ್ರಾಮದ ನಿವಾಸಿ ಶ್ರೀನಿವಾಸ್ @ ದೇವ (47) ಎಂಬಾತನ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಯು ವಿವಿಧ ಸ್ಥಳಗಳಲ್ಲಿ ಜೂಜಾಟ ನಡೆಸುವುದು, ಬಡ್ಡಿ ವ್ಯವಹಾರ ಮಾಡುವುದು, ಚಿನ್ನಾಭರಣಗಳನ್ನು ಗಿರವಿಯಾಗಿ ಪಡೆದು ಅತಿಯಾದ ಬಡ್ಡಿ ವಸೂಲಿ ಮಾಡುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ. ಅಲ್ಲದೆ, ರೌಡಿ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಿವಾಸ್ @ ದೇವನನ್ನು ಮೂರು ತಿಂಗಳ ಅವಧಿಗೆ ಮೈಸೂರು ಜಿಲ್ಲೆಯಿಂದ ಗಡಿಪಾರು ಮಾಡಿ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ವಾಸಿಸುವಂತೆ ಆದೇಶಿಸಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.


















