ಬೆಂಗಳೂರು: ಸರ್ದಾರ್ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರು ಆರ್ಎಸ್ಎಸ್ ಮೇಲೆ ನಿಷೇಧ ಹೇರಿದ್ದ ಸಂದರ್ಭದಲ್ಲಿ, ಇದೇ ಆರ್ಎಸ್ಎಸ್ ನಾಯಕರು ಅವರ ಬಳಿ ಮನವಿ ಮಾಡಿಕೊಂಡಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಆರ್ಎಸ್ಎಸ್ ನೋಂದಣಿ ಕುರಿತಂತೆ ಸಿ.ಟಿ. ರವಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಟಿ. ರವಿಗೆ ಆರ್ಎಸ್ಎಸ್ ಇತಿಹಾಸದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ ಎಂದು ಹೇಳಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್ಎಸ್ಎಸ್ ನ ಪ್ರಮುಖ ನಾಯಕರೇ ಪತ್ರ ಬರೆದಿದ್ದರು. ನೋಂದಣಿ ಮಾಡಿಸಿಕೊಳ್ಳಿ ಎಂದು ಹೇಳಿದರೆ ಅವರಿಗೆ ಏಕೆ ಭಯ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಸಂವಿಧಾನದ ಅಡಿಯಲ್ಲಿ ಜಾರಿಯಲ್ಲಿರುವ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಲಿ. ನಾನು ಸ್ವತಃ ಕೇಶವಕೃಪಕ್ಕೆ ಹೋಗುತ್ತೇನೆ. ಇಲ್ಲವಾದರೆ ಅವರೇ ನನ್ನ ಕಚೇರಿಗೆ ಬಂದು ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಈ ದೇಶದಲ್ಲಿ ಬೀದಿ ವ್ಯಾಪಾರಿಯೂ ನೋಂದಣಿ ಮಾಡಿಸಿಕೊಳ್ಳಬೇಕು. ದೇವಸ್ಥಾನಗಳೂ ನೋಂದಣಿಗೆ ಒಳಪಡುತ್ತವೆ. ದೇವಾಲಯಗಳು ಲೆಕ್ಕ ನೀಡಬೇಕು, ಸಾರ್ವಜನಿಕರೂ ಲೆಕ್ಕ ನೀಡಬೇಕು, ಆದಾಯ ತೆರಿಗೆ ಇಲಾಖೆಯ ಮುಂದೆ ಕೂಡ ಲೆಕ್ಕ ಸಲ್ಲಿಸಬೇಕು. ಆದರೆ ಆರ್ಎಸ್ಎಸ್ ಮಾತ್ರ ಯಾವುದೇ ಲೆಕ್ಕ ನೀಡುವ ಅಗತ್ಯವಿಲ್ಲವೇ? ಅವರಿಗೆ ಬರುವ ದೇಣಿಗೆಗಳ ಬಗ್ಗೆ ಯಾವುದೇ ಲೆಕ್ಕ ನೀಡಬೇಕಾಗಿಲ್ಲವೇ ಎಂದು ಪ್ರಶ್ನಿಸಿದರು.

ಆರ್ಎಸ್ಎಸ್ ನಾಯಕರು ಹಿಂದೆ ಯಾವ ರೀತಿ ಮನವಿ ಮಾಡಿಕೊಂಡಿದ್ದರು ಎಂಬುದಕ್ಕೆ ಅವರದೇ ದಾಖಲೆಗಳು ಸಾಕ್ಷಿಯಾಗಿವೆ. ವೀರ ಸಾವರ್ಕರ್ ಅವರು ಬ್ರಿಟಿಷರ ಆಡಳಿತದಿಂದ ಪಿಂಚಣಿ ಪಡೆಯುತ್ತಿದ್ದರು. ತಿಂಗಳಿಗೆ 60 ರೂಪಾಯಿ ಪಿಂಚಣಿ ಸ್ವೀಕರಿಸುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
















