ಮನೆ ಯೋಗಾಸನ ಹೈ ಬಿಪಿ ನಿಯಂತ್ರಿಸುವ ಯೋಗಾಸನಗಳಿವು

ಹೈ ಬಿಪಿ ನಿಯಂತ್ರಿಸುವ ಯೋಗಾಸನಗಳಿವು

0

ಅಧಿಕ ರಕ್ತದೊತ್ತಡದ ಸಮಸ್ಯೆಯ ಕಡೆಗಣನೆ ಒಳ್ಳೆಯದಲ್ಲ. ಅಧಿಕ ರಕ್ತದೊತ್ತಡದಿಂದ ಪಾರ್ಶವಾಯು, ಎದೆನೋವು, ಹೃದ್ರೋಗ ಸಮಸ್ಯೆ ಸೇರಿದಂತೆ ಅನೇಕ ಮಾರಣಾಂತಿಕ ಸಮಸ್ಯೆಗಳೇ ಎದುರಾಗುತ್ತವೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಉತ್ತಮ ಮಾರ್ಗವಾಗಿದೆ. ಅದು ಆಹಾರ ಸೇವನೆಯಲ್ಲಿರಬಹುದು ಅಥವಾ ದಿನಿತ್ಯದ ಅಭ್ಯಾಸಗಳಲ್ಲಿ ಇರಬಹುದು. ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆ ಸೇವನೆ ಮಾಡುವುದು, ಎಣ್ಣೆ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.

ಇನ್ನು ದಿನನಿತ್ಯದ ಜೀವನೈಲಿಯಲ್ಲಿ ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೆ ಯೋಗಾಸನಗಳನ್ನು ಅಳವಡಿಸಿಕೊಳ್ಳಬಹುದು. ಯೋಗಾಸನದಿಂದ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಹಾಗಾದರೆ ಯಾವೆಲ್ಲ ಆಸನಗಳಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎನ್ನುವುದನ್ನು ತಿಳಿದುಕೊಳ್ಳಿ.

ಯೋಗಾಸನ ಮತ್ತು ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ದೇಹದಲ್ಲಿ ಕೊಬ್ಬಿನ ಅಂಶ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಸೇವನೆ ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಯೋಗದಲ್ಲಿನ ಉಸಿರಾಟದ ನಿಯಂತ್ರಣಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೈಪರ್ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡವನ್ನು ಈ ಆಸನಗಳಿಂದ ನಿಯಂತ್ರಿಸಬಹುದು.

ಶವಾಸನ

ಸಾಮಾನ್ಯವಾಗಿ ಎಲ್ಲಾ ರೀತಿಯ ಯೋಗ, ವ್ಯಾಯಾಮ ಮಾಡಿದ ನಂತರ ಶವಾಸನವನ್ನು ಮಾಡಲಾಗುತ್ತದೆ. ಶವಾಸನ ಅತೀ ಅರಾಮದಾಯಕ ಅನುಭವವನ್ನು ದೇಹಕ್ಕೆ ನೀಡುತ್ತದೆ. ಅಲ್ಲದೆ ಇದು ವಿಶ್ರಾಂತ ಸ್ಥಿತಿಯನ್ನು ಸೂಚಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಶವಾಸನ ಉತ್ತಮವಾಗಿದೆ. ಈ ಆಸನ ಮಾಡುವ ವೇಳೆ ಸಂಪೂರ್ಣ ಗಮನ ಉಸಿರಾಟದ ಮೆಲೆ ಇರುತ್ತದೆ. ಹೀಗಾಗಿ ದೇಹದಲ್ಲಿ ರಕ್ತದ ಚಲನೆ ಸರಾಗವಾಗಿ ಆಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಸುಖಾಸನ

ಕಾಲನ್ನು ಮಡಚಿ, ಚಿನ್ಮುದ್ರೆ ಹಾಕಿಕೊಂಡು ಕುಳಿತಾಗ ಇಡೀ ದೇಹಕ್ಕೆ ರಕ್ತಸಂಚಾರ ಸುಲಲಿತವಾಗಿ ಆಗುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ದಿನನಿತ್ಯ 15 ರಿಂದ 20 ನಿಮಿಷಗಳವರೆಗೆ ಸುಖಾಸನವನ್ನು ಮಾಡುವುದರಿಂದ ಉಸಿರಾಟದ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಜೊತೆಗೆ ದೇಹದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಅದೂ ಕೂಡ ಸರಿಯಾಗುತ್ತದೆ.

ಪಶ್ಚಿಮೋತ್ಥಾನಾಸನ

ಸುಲಭವಾಗಿ ಮಾಡುವ ಯೋಗಾಸನಗಳಲ್ಲಿ ಪಶ್ಚಿಮೋತ್ಥಾನಾಸನ ಕೂಡ ಒಂದು. ಮೊದಲು ಕಾಲನ್ನು ನೇರವಾಗಿ ಬಿಟ್ಟು ಕುಳಿತುಕೊಳ್ಳಿ, ನಂತರ ಕೈಗಳನ್ನು ನಿಧಾನವಾಗಿ ಬಗ್ಗಿಸಿ ಪಾದದವರೆಗೆ ಮುಟ್ಟಿಸಲು ಯತ್ನಿಸಿ. ಬೆನ್ನಿನ ಭಾಗವನ್ನು ಬಗ್ಗಿಸಿ ನಿಮ್ಮ ಮೂಗನ್ನು ಮೊಣಕಾಲಿಗೆ ತಾಗಿಸಲು ಯತ್ನಿಸಿ. ಇದು ಒಂದೆರಡು ದಿನದಲ್ಲಿ ಸಾಧ್ಯವಾಗುವುದಿಲ್ಲ.

ನಿರಂತರ ಅಭ್ಯಾಸದಿಂದ ಮಾತ್ರ ಪರಿಪೂರ್ಣ ಪಶ್ಚಿಮೋತ್ಥಾನಾಸನ ಮಾಡಲು ಸಾಧ್ಯ. ಅಲ್ಲದೆ ಈ ಆಸನ ದೇಹದಲ್ಲಿ ಕೊಬ್ಬನ್ನು ಕರಗಿಸಲು ಕೂಡ ನೆರವಾಗುತ್ತದೆ, ಇದರಿಂದ ದೇಹದಲ್ಲಿನ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ವಜ್ರಾಸನ

ಸ್ನಾಯುಗಳು ಮತ್ತು ಕಾಲುಗಳನ್ನು ಬಲಪಡಿಸಲು ವಜ್ರಾಸನ ಉತ್ತಮವಾಗಿದೆ. ಕಾಲನ್ನು ಹಿಂದಕ್ಕೆ ಚಾಚಿ ತೊಡೆಗಳ ಮೇಳೆ ಕುಳಿತುಕೊಂಡು ದೀರ್ಘವಾಗಿ ಉಸಿರಾಡುತ್ತಾ ಉಸಿರಾಟದ ಮೇಲೆ ನಿಗಾ ವಹಿಸಬೇಕು. ಆಗ ದೇಹದಲ್ಲಿ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ.

ಪರಿಣಾಮವಾಗಿ ರಕ್ತದೊತ್ತಡದ ಸಮಸ್ಯೆ ನಿವಾರಣೆಯಾಗುತ್ತದೆ. ದಿನಕ್ಕೆ 20 ನಿಮಿಷವಾದರೂ ವಜ್ರಾಸನದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ಏಕಾಗ್ರತೆಯನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ.

ಪ್ರಾಣಾಯಾಮ

ದೇಹದ ಸರ್ವ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಾಣಾಯಾಮ ಸಹಾಯ ಮಾಡುತ್ತದೆ. ಉಸಿರಾಟದ ಸಮಸ್ಯೆಗೂ ಪರಿಹಾರ ನೀಡುವ ಪ್ರಾಣಯಾಮ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಲು ನೆರವಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ

ಅನುಲೋಮ ವಿಲೋಮ ಪ್ರಾಣಾಯಾಮ ಅಥವಾ ಉಚ್ವಾಸ-ನಿಶ್ವಾಸ ಕ್ರಿಯೆಗಳಿಂದ ಉಸಿರಾಟದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಜೊತೆಗೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನೂ ಕೂಡ ನಿಯಂತ್ರಿಸಬಹುದಾಗಿದೆ.