ಮನೆ ಕಾನೂನು 5 ವರ್ಷ ನಿಯೋಜನೆ ಪೂರ್ಣಗೊಂಡ ಸರ್ಕಾರಿ ನೌಕರರನ್ನು ಮಾತೃ ಇಲಾಖೆಗೆ ಕಳುಹಿಸಲು ಆದೇಶ

5 ವರ್ಷ ನಿಯೋಜನೆ ಪೂರ್ಣಗೊಂಡ ಸರ್ಕಾರಿ ನೌಕರರನ್ನು ಮಾತೃ ಇಲಾಖೆಗೆ ಕಳುಹಿಸಲು ಆದೇಶ

0

ಬೆಂಗಳೂರು: ನಿಯೋಜನೆ ಮೇಲೆ ಗರಿಷ್ಠ ಐದು ವರ್ಷಗಳ ಅವಧಿ ಪೂರ್ಣಗೊಳಿಸಿರುವ ಸರ್ಕಾರಿ ನೌಕರರನ್ನು ಕೂಡಲೇ ಮಾತೃ ಇಲಾಖೆಗೆ ಮರಳಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಇತರೆ ಇಲಾಖೆಗಳ ಮುಖ್ಯಸ್ಥರಿಗೆ ಮಂಗಳವಾರ ಸುತ್ತೋಲೆ ರವಾನಿಸಿದ್ದು, ಸೂಚನೆ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

ಯಾವುದೇ ಹುದ್ದೆಗೆ ಒಂದು ಸಂದರ್ಭದಲ್ಲಿ ಮಾಡುವ ನಿಯೋಜನೆ ಗರಿಷ್ಠ ಅವಧಿ 5 ವರ್ಷಗಳು. ಈ ನಿಯೋಜನೆ ಬಳಿಕ ಮಾತೃ ಇಲಾಖೆಯಲ್ಲಿ 2 ವರ್ಷಗಳ ಕೂಲಿಂಗ್ ಆಫ್ ಅವಧಿ ಮುಗಿಸಬೇಕು. ಸಕ್ಷಮ ಪ್ರಾಧಿಕಾರದಿಂದ ಪೂರ್ವ ಅನುಮತಿಯೊಂದಿಗೆ ನಿಯೋಜನೆ ಮೇಲೆ 5 ವರ್ಷ ಪೂರ್ಣಗೊಳಿಸಿದವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯೋಜನೆಗೆ ಅವಕಾಶವಿರುವ ಹುದ್ದೆಳಿಗೆ ಮಾತ್ರ ಸಮಾನ ದರ್ಜೆಯ ಅಧಿಕಾರಿ, ನೌಕರರನ್ನು ಅನಿವಾರ್ಯ ಪ್ರಕರಣಗಳಲ್ಲಿ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಠಿಯಿಂದ ನಿಯಮಾನುಸಾರ ನಿಯೋಜನೆ ಮಾಡಬಹುದು. ಆದರೆ ಯಾವುದೇ ಇಲಾಖೆಯಲ್ಲಿ ಕೆಳದರ್ಜೆ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿ ಆಧಾರದಲ್ಲಿ ನೇಮಕ ಅಥವಾ ನಿಯೋಜನೆ ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.