ಚಿಕ್ಕೋಡಿ: ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ್ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಮುರ್ಗುಡ್ ಗ್ರಾಮದ ಜಿತೇಂದ್ರ ವಿಲಾಸ್ ಲೋಕ್ರೆ (36), ರುಕ್ದಿ ಗ್ರಾಮದ ಸವಿತಾ ಅಮರ್ ಕಾಂಬಳೆ (27), ಬೆಳಗಾವಿಯ ಅಥಣಿಯ ರೇಷ್ಮಾ ದಿಲೀಪ್ (34) ಮತ್ತು ಯಶ್ ದಿಲೀಪ್ (17) ಮೃತ ದುರ್ದೈವಿಗಳು.
ಜಿತೇಂದ್ರ ವಿಲಾಸ್ ಲೋಕ್ರೆ, ಸವಿತಾ ಅಮರ್ ಕಾಂಬಳೆ, ರೇಷ್ಮಾ ದಿಲೀಪ್ ಮೃತದೇಹಗಳು ಪತ್ತೆಯಾಗಿದ್ದು, ಯಶ್ ದಿಲೀಪ್ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ವರು ತೀರ್ಥಯಾತ್ರೆಗೆ ತೆರಳುತಿದ್ದರು. ಶುಕ್ರವಾರ (ಮೇ 17)ರ ರಾತ್ರಿ ಆನೂರು ಗ್ರಾಮದಲ್ಲಿನ ಅತಿಥಿ ಗೃಹದಲ್ಲಿ ತಂಗಿದ್ದರು. ಬೆಳಿಗ್ಗೆ ಪಕ್ಕದ ಗ್ರಾಮ ಬಸ್ತೆವಾಡದಲ್ಲಿನ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ.
ಈ ವೇಳೆ ಇಬ್ಬರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾರೆ. ಇವರನ್ನು ಕಾಪಾಡಲು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾಗಲ್ ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.