ಬೆಳಗಾವಿ : ನೈಟಿ ಹಾಕಿದ್ದಕ್ಕೆ ಗಂಡ ತನ್ನ ಹೆಂಡತಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ನಡೆದಿದೆ. ಕೃಷ್ಣಾಜಿ ಪಾಟೀಲ್ ಪತ್ನಿಗೆ ಬೆಂಕಿ ಇಟ್ಟ ಭೂಪ. ಘಟನೆಯಲ್ಲಿ ಪತ್ನಿ ಮಂಜುಳಾ ಪಾಟೀಲ್ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
80% ಸುಟ್ಟ ಗಾಯಗಳಾದ ಹಿನ್ನೆಲೆ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಯಿಂದ ಗೋವಾಗೆ ಶಿಫ್ಟ್ ಮಾಡಿದ್ದಾರೆ. ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಹೆಂಡತಿ ಸೀರೆ ಬದಲು ನೈಟಿ, ಗೌನ್ ಹಾಕುತ್ತಿರುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು.
ವಾಗ್ವಾದ ಅತೀರೇಖಕ್ಕೆ ಹೋಗಿ ಪತಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತಕ್ಷಣ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂದಗಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















