ಮನೆ ರಾಜಕೀಯ ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ಆಡಳಿತ ಅಂತ್ಯ: ಅಮಿತ್‌ ಶಾ

ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ಆಡಳಿತ ಅಂತ್ಯ: ಅಮಿತ್‌ ಶಾ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ. ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ಆಡಳಿತ ಅಂತ್ಯಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Join Our Whatsapp Group

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಶಾ, ‘ಪದೇ ಪದೇ ಸುಳ್ಳು ಭರವಸೆಗಳನ್ನು ನೀಡಿ ಸಾರ್ವಜನಿಕರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ದೆಹಲಿ ಜನತೆ ತೋರಿಸಿಕೊಟ್ಟಿದ್ದಾರೆ. ಕಲುಷಿತಗೊಂಡ  ಯಮುನಾ ನದಿ, ಕಲುಷಿತ ಕುಡಿಯುವ ನೀರು, ಒಡೆದ ರಸ್ತೆಗಳು, ತುಂಬಿ ತುಳುಕುತ್ತಿರುವ ಚರಂಡಿಗಳು, ಪ್ರತಿ ಬೀದಿಯಲ್ಲಿ ತೆರೆದಿರುವ ಮದ್ಯದಂಗಡಿಗಳಿಗೆ ಸಾರ್ವಜನಿಕರು ತಮ್ಮ ಮತಗಳ ಮೂಲಕ ಉತ್ತರಿಸಿದ್ದಾರೆ’ ಎಂದು ಶಾ ಟೀಕಿಸಿದ್ದಾರೆ.

ದೆಹಲಿಯಲ್ಲಿ ಈ ವಿಜಯಕ್ಕಾಗಿ ಹಗಲಿರುಳು ಶ್ರಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಎಲ್ಲಾ ಕಾರ್ಯಕರ್ತರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೆಹಲಿ ಆದರ್ಶ ರಾಜಧಾನಿಯಾಗಲಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಸುಳ್ಳಿನ ಆಡಳಿತ ಕೊನೆಗೊಂಡಿದೆ. ಇದು ದುರಹಂಕಾರ ಮತ್ತು ಅರಾಜಕತೆಯ ಸೋಲು. ರಾಷ್ಟ್ರ ರಾಜಧಾನಿಯಲ್ಲಿ ‘ಮೋದಿ ಕೀ ಗ್ಯಾರಂಟಿ’ಗೆ ಗೆಲುವು ಲಭಿಸಿದೆ. ಈ ಬೃಹತ್‌ ಜನಾದೇಶಕ್ಕಾಗಿ ದೆಹಲಿಯ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳು. ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್ 1 ರಾಜಧಾನಿ ಮಾಡಲು ಸಂಕಲ್ಪ ಮಾಡಿದೆ. ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ದೆಹಲಿ ಮಾದರಿಯಾಗಲಿದೆ ಎಂದು ಭರವಸೆಗಳನ್ನು ಉಲ್ಲಂಘಿಸುವವರಿಗೆ ದೆಹಲಿ ಜನರು ಪಾಠವನ್ನು ಕಲಿಸಿದ್ದಾರೆ ಎಂದು ಶಾ ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಶನಿವಾರ) ಹೊರಬೀಳುತ್ತಿದ್ದು, ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಸಂಜೆ 3.30) ಪ್ರಕಾರ ಬಿಜೆಪಿ 48 ಹಾಗೂ ಎಎಪಿ 22 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.